Sunday, 18th August 2019

Recent News

ಪತ್ನಿ, ಮಕ್ಕಳನ್ನು ಕೊಂದು ವಾಟ್ಸಪ್‍ಗೆ ವಿಡಿಯೋ ಹಾಕಿದ್ದ ಟೆಕ್ಕಿ ಅರೆಸ್ಟ್!

– ಕರ್ನಾಟಕ ಪೊಲೀಸರ ಸಹಾಯದಿಂದ ಬಂಧನ

ನೊಯ್ಡಾ: ಪತ್ನಿ ಹಾಗೂ ಮಕ್ಕಳು ಮಲಗಿದ್ದ ಸಂದರ್ಭದಲ್ಲಿ ಅವರನ್ನು ಕೊಂದು ವಿಡಿಯೋ ಮಾಡಿ ವಾಟ್ಸಪ್‍ಗೆ ಕಳುಹಿಸಿದ್ದ ಕಿರಾತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪತಿಯನ್ನು ಸುಮಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾನೆ. ಈತನನ್ನು ಕರ್ನಾಟಕ ಮೂಲದ ಪೊಲೀಸರ ಸಹಾಯದಿಂದ ಘಾಜಿಯಾಬಾದ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು.

ಏನಿದು ಘಟನೆ?
ಶನಿವಾರ ರಾತ್ರಿ ಆರೋಪಿ ಸುಮಿತ್, ಪತ್ನಿ 32 ವರ್ಷದ ಅನ್ಶು ಬಾಲ ಹಾಗೂ ಮಕ್ಕಳಾದ 5 ವರ್ಷದ ಪ್ರತಿಮೇಶ್ ಹಾಗೂ 4 ವರ್ಷದ ಆಕೃತಿಗೆ ಮತ್ತು ಬರುವ ರಾಸಾಯನಿಕ ಕುಡಿಸಿದ್ದಾನೆ. ಹೀಗೆ ಇದನ್ನು ಕುಡಿದ ಮೂವರೂ ನಿದ್ರೆಗೆ ಜಾರಿದ್ದಾರೆ. ನಂತರ ಆರೋಪಿ ಮೂವರ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ್ದಲ್ಲದೇ ಆ ಬಳಿಕ ಮೃತದೇಹಗಳ ವಿಡಿಯೋ ಮಾಡಿ ಅದನ್ನು ತನ್ನ ಫ್ಯಾಮಿಲಿ ವಾಟ್ಸಪ್ ಗ್ರೂಪ್‍ಗೆ ಕಳುಹಿಸಿದ್ದಾನೆ. ಅಲ್ಲದೆ ವಿಡಿಯೋದಲ್ಲಿ ತಾನು ಕೂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕಾಗಿ ಈಗಾಗಲೇ ವಿಷ ಖರೀದಿ ಮಾಡಿರುವುದಾಗಿ ತಿಳಿಸಿದ್ದಾನೆ. ಸಂಬಂಧಿಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕುಮಾರ್ ಫ್ಲ್ಯಾಟ್ ನಿಂದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಹೀಗಾಗಿ ಘಟನೆ ನಡೆದ 22 ಗಂಟೆಗಳ ಬಳಿಕ ಅಂದರೆ ಭಾನುವಾರ ಮೃತದೇಹ ಸಿಕ್ಕಿದೆ.

ಬೆಂಗಳೂರಲ್ಲಿ ಕೆಲಸ:
ಮೃತ ಅನ್ಶು ಬಾಲ ಅವರು ಇಂದಿರಾಪುರದ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಸುಮಿತ್ ಕೂಡ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಈತ ಮೊದಲು ಇಲ್ಲೇ ಇರುವ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದನು. ಆದರೆ ಕಳೆದ ಡಿಸೆಂಬರ್ ನಲ್ಲಿ  ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದನು.

ಆ ಬಳಿಕ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಸುಮಿತ್ ಜೊತೆ ತಂದೆ-ತಾಯಿ ಕೂಡ ಫ್ಲ್ಯಾಟ್‍ನಲ್ಲಿ ವಾಸವಾಗಿದ್ದನು. ಆದ್ರೆ ತಂದೆ-ತಾಯಿ ಕಳೆದ ವಾರ ಮದುವೆಗೆಂದು ಊರಿಗೆ ತೆರಳಿದ್ದರು. ಹೀಗಾಗಿ ಪತ್ನಿ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿದ್ದರು. ಈ ವೇಳೆ ಸುಮಿತ್ ಈ ಕೃತ್ಯ ಎಸಗಿದ್ದಾನೆ.

ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರುವ ಮೊದಲು ಸುಮಿತ್, ದೆಹಲಿಯ ಗುರುಗ್ರಾಮ, ನೊಯ್ಡಾದ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಡಿಸೆಂಬರ್ ನಲ್ಲಿ ಆತ ಘಾಜಿಯಾಬಾದ್‍ಗೆ ಬಂದಿದ್ದನು. ಈ ವಿಚಾರ ಸಂಬಂಧಿಕರಿಗೆ ಗೊತ್ತಿರಲಿಲ್ಲ. ಆದ್ರೆ ಕಳೆದ ಕೆಲ ದಿನಗಳಿಂದ ಆತ ಸತತವಾಗಿ ಸಿಗರೇಟ್ ಸೇದುತ್ತಿರುವುದನ್ನು ಗಮನಿಸಿ ಸಂಬಂಧಿಕರು ಆತನನನ್ನು ವಿಚಾರಿಸಿದಾಗ ಆರ್ಥಿಕ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ ಎಂದು ಅನ್ಶು ಬಾಲ ಸಹೋದರ ಪಂಕಜ್ ತಿಳಿಸಿದ್ದಾರೆ.

ಸೈನೇಡ್ ಖರೀದಿ:
ಆರೋಪಿ ಕುಮಾರ್ ಗ್ಯಾನ್‍ಖಂಡ್ ಮೆಡಿಕಲ್ ಸ್ಟೋರ್‍ನಿಂದ ಪೊಟಾಶಿಯಂ ಸೈನೆಡ್ ಅನ್ನು ಖರೀದಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಸ್ಟೋರ್ ಮಾಲಕ ಮುಕೇಶ್ ನನ್ನು ಸೋಮವಾರ ಬಂಧಿಸಿದ್ದಾರೆ. ಈ ವೇಳೆ ಆತ ನಾನು ಸಮಿತ್ ಗೆ ಸೈನೆಡ್ ನೀಡಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ ನಾನು ಸೈನೆಡ್ ಹಣ ಎಂದು ತಗೊಂಡು ಆತನಿಗೆ ನಿದ್ದೆ ಬರುವ ಮದ್ದು ಕೊಟ್ಟಿರುವುದಾಗಿ ಹೇಳಿದ್ದಾನೆ. ಮಾಲಕನ ಮಾತಿನಿಂದ ಸಂಶಯಗೊಂಡ ಪೊಲೀಸರು ಆತನ ಸ್ಟೋರ್ ಹುಡುಕಾಡಿದ್ದಾರೆ. ಆದ್ರೆ ಅಲ್ಲಿ ಸೈನೆಡ್ ಸಿಕ್ಕಿಲ್ಲ. ಸುಮಿತ್ ಡ್ರಗ್ ವ್ಯಸನಿಯಾಗಿದ್ದನು. ಇದರಿಂದಾಗಿ ಆತನಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ತನ್ನ ಕೆಲಸವನ್ನೂ ಕಳೆದುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸುಮಿತ್ ಕುಮಾರ್, ಜಾರ್ಖಂಡ್ ನ ಜೆಮ್‍ಶೆಡ್‍ಪುರ ಮೂಲದ ಅನ್ಶು ಬಾಲರನ್ನು 2011ರಲ್ಲಿ ವರಿಸಿದ್ದನು. ಕಳೆದ ವರ್ಷ ಡಿಸೆಂಬರ್ ನಲ್ಲಿ ಕೆಲಸ ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದನು.

Leave a Reply

Your email address will not be published. Required fields are marked *