Crime
ಗೆಳತಿ ಜೊತೆ 2 ದಿನ ಕಳೆಯಲು ಫ್ಲ್ಯಾಟ್ಗೆ ಬಂದವ ಶವವಾಗಿ ಪತ್ತೆ – ಪ್ರೇಯಸಿ ನಾಪತ್ತೆ

– ನಿಗೂಢವಾಗಿ ಸಾವನ್ನಪ್ಪಿದ ಯುವಕ
– ಶವವನ್ನು ಫ್ಲ್ಯಾಟ್ನಲ್ಲಿ ಎಸೆದು ಗೆಳತಿ ಪರಾರಿ
ಲಕ್ನೋ: ಯುವಕನೊಬ್ಬ ತನ್ನ ಗೆಳತಿಯೊಂದಿಗೆ ನಗರಕ್ಕೆ ಬಂದು ನಿಗೂಢವಾಗಿ ಸಾವನ್ನಪ್ಪಿದ ಘಟನೆ ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ನಡೆದಿದೆ.
ಮೃತ ಯುವಕನ್ನು ಅಜಯ್ ದಾಂಡಿಯಾಲ್ (24) ಎಂದು ಗುರುತಿಸಲಾಗಿದೆ. ಡೆಹ್ರಾಡೂನ್ನ ನಿವಾಸಿ ಅಜಯ್ ದೆಹಲಿ ಬಳಿಯ ಗಾಜಿಯಾಬಾದ್ನ ಇಂದಿರಾಪುರಂನಲ್ಲಿರುವ ನಿಹೋ ಸ್ಕಾಟಿಷ್ನಲ್ಲಿರುವ ತನ್ನ ಸಹೋದರಿಯ ಫ್ಲ್ಯಾಟ್ಗೆ ಗೆಳತಿಯೊಂದಿಗೆ ಬಂದಿದ್ದನು. ಎರಡು ದಿನ ಕಳೆಯಲು ಬಂದಿದ್ದ ಈತನ ಶವ ಫ್ಲ್ಯಾಟ್ನಲ್ಲಿ ಪತ್ತೆಯಾಗಿದೆ.
ಏನಿದು ಪ್ರಕರಣ?
ಅಜಯ್ ಸಹೋದರಿ ಅಕ್ಷತಾ ಗುರುಗ್ರಾಮಕ್ಕೆ ಹೋಗಿದ್ದು ಕಳೆದ ಎರಡೂವರೆ ತಿಂಗಳಿನಿಂದ ಈ ಫ್ಲ್ಯಾಟ್ ಖಾಲಿಯಾಗಿತ್ತು. ಅಕ್ಷತಾ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಫ್ಲ್ಯಾಟ್ಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಶನಿವಾರ ತಡರಾತ್ರಿ ಗೆಳತಿಯೊಂದಿಗೆ ಫ್ಲ್ಯಾಟ್ಗೆ ಬಂದಿದ್ದ ಅಜಯ್ಗೆ ವಿದ್ಯುತ್ ಇಲ್ಲದೇ ಇರುವುದು ನೋಡಿ ಕೋಪಗೊಂಡು ಅಕ್ಷತಾ ಜೊತೆ ಜಗಳವಾಡಿದ್ದಾನೆ. ಜಗಳವಾಡಿದ ಬಳಿಕ ಅಜಯ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಗೆಳತಿ ಹೇಳಿದ್ದಾಳೆ. ಆದರೆ ಈತನ ಸಾವಿನ ಸುತ್ತ ಈಗ ಹಲವು ಅನುಮಾನ ಎದ್ದಿದೆ.
ಸಹೋದರಿಗೆ ಕರೆ:
ಆಸ್ಪತ್ರೆಗೆ ಅಜಯ್ನನ್ನು ಸಾಗಿಸುವ ಮೊದಲು ಗೆಳತಿ ಅಜಯ್ ಸಹೋದರಿ ಅಕ್ಷತಾಗೆ ಕರೆ ಮಾಡಿ ನಡೆದ ಘಟನೆ ವಿವರಿಸಿದ್ದಾಳೆ. ವಿದ್ಯುತ್ ವಿಚಾರಕ್ಕೆ ರಾತ್ರಿ ಜಗಳವಾಡಿದ್ದ ಅಜಯ್ನನ್ನು ಬೆಳಗ್ಗೆ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ವೇಳೆ ಆತ ಉಸಿರಾಡುತ್ತಿದ್ದ. ಕೂಡಲೇ ಆತನನ್ನು ನಾನು ಕೆಳಗಡೆ ಇಳಿಸಿದ್ದೇನೆ ಎಂದು ಹೇಳಿದ್ದಾಳೆ. ಈ ವೇಳೆ ಅರ್ಚನಾ ಅಜಯ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ನಾನು ಬರುತ್ತೇನೆ ಎಂದು ತಿಳಿಸಿದ್ದಾಳೆ.
ಸೆಕ್ಯುರಿಟಿಗೆ ಅನುಮಾನ:
ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಅಜಯ್ ಮೃತಪಟ್ಟಿದ್ದಾನೆ. ಭಯಗೊಂಡ ಗೆಳತಿ ಮೃತ ದೇಹವನ್ನು ಮತ್ತೆ ಫ್ಲ್ಯಾಟ್ಗೆ ವಾಪಸ್ ತಂದಿದ್ದಾಳೆ. ಅಜಯ್ ಅತಿಯಾಗಿ ಕುಡಿದಿದ್ದಾನೆ. ಇವನನ್ನು ಫ್ಲ್ಯಾಟ್ಗೆ ಕರೆದೊಯ್ಯಲು ಸಹಾಯ ಮಾಡು ಎಂದು ಸೆಕ್ಯುರಿಟಿ ಗಾರ್ಡ್ಗೆ ಕೇಳಿಕೊಂಡಿದ್ದಾಳೆ. ಸೆಕ್ಯುರಿಟಿ ಗಾರ್ಡ್ ಸಹಾಯದಿಂದ ಅಜಯ್ ದೇಹವನ್ನು ಫ್ಲ್ಯಾಟ್ ಮರಳಿ ತಂದಿದ್ದಾಳೆ.
ಸ್ವಲ್ಪ ಸಮಯದ ನಂತರ ಗಾರ್ಡ್ ಅನುಮಾನದಿಂದ ಫ್ಲ್ಯಾಟ್ನಲ್ಲಿರುವ ನಿವಾಸಿಗಳ ಸಂಘದ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ನಿವಾಸಿಗಳು ಫ್ಲ್ಯಾಟ್ಗೆ ಆಗಮಿಸಿದಾಗ ಅಜಯ್ ಮೃತಪಟ್ಟಿರುವುದು ತಿಳಿಯುತ್ತದೆ. ನಂತರ ಸ್ಥಳಕ್ಕೆ ಬಂದಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಗೆಳತಿ ನಾಪತ್ತೆ:
ಫ್ಲ್ಯಾಟ್ಗೆ ಶವವನ್ನು ತಂದ ಬಳಿಕ ಗೆಳತಿ ನಾಪತ್ತೆಯಾಗಿದ್ದಾಳೆ. ಅಷ್ಟೇ ಅಲ್ಲದೇ ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ. ಗೆಳತಿ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ ಹಿನ್ನೆಲೆಯಲ್ಲಿ ಈಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯೋ? ಅತ್ಮಹತ್ಯೆಯೋ ಈ ನಿಟ್ಟಿನಲ್ಲಿ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.
