Latest

ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್

Published

on

Share this

ನವದೆಹಲಿ: ಕೇಂದ್ರದ ಹೊಸ ಐಟಿ ನಿಯಮಗಳು ಜಾರಿಗೆ ಬಂದ ಬಳಿಕ ಮೊದಲ ಬಾರಿಗೆ ಅಮೆರಿಕದ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟ್ಟರ್ ವಿರುದ್ಧ ಕೇಸ್ ದಾಖಲಾಗಿದೆ.

ಜೂನ್ 5ರಂದು ಗಾಜಿಯಾಬಾದ್‍ನಲ್ಲಿ ಮುಸ್ಲಿಂ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿತ್ತು. ಕೋಮು ಭಾವನೆ ಕೆರಳಿಸುವಂತೆ ಪ್ರಚೋದಿಸಿದ ಆರೋಪದ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಟ್ವಿಟ್ಟರ್ ಸೇರಿದಂತೆ ಕೆಲ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಟ್ವಿಟ್ಟರ್ ಮೇಲೆ ಕೇಸ್ ಬಿದ್ದಿದ್ದು ಹೇಗೆ?
ಭಾರತದಲ್ಲಿ ಮೇ 25ರಿಂದ ಹೊಸ ಡಿಜಿಟಲ್ ನಿಮಯಗಳು ಜಾರಿಗೆ ಬಂದಿದೆ. ಈ ನಿಯಮಗಳ ಸೂಚನೆಯನ್ನು ಟ್ವಿಟ್ಟರ್ ಪಾಲಿಸಿರಲಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಟ್ವಿಟ್ಟರ್ ಗೆ  ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ನೀಡಿದ ಬಳಿಕವೂ ನಿಯಮ ಜಾರಿ ಮಾಡದ ಹಿನ್ನೆಲೆಯಲ್ಲಿ ಈಗ ಕೇಸ್ ದಾಖಲಾಗಿದೆ.

ಟ್ವಿಟ್ಟರ್ ನಿಯಮಗಳನ್ನು ಪಾಲನೇ ಮಾಡದ ಕಾರಣ ಈ ಮೊದಲು ಇದ್ದ ಕಾನೂನು ರಕ್ಷಣೆ ರದ್ದುಗೊಂಡಿದೆ. ಹೀಗಾಗಿ ಯಾವುದೇ ಪ್ರಕಾಶಕರು ಮೇಲೆ ಹೇಗೆ ಭಾರತದ ಕಾನೂನುಗಳ ಅಡಿ ಕ್ರಮಗಳನ್ನು ನಡೆಸಲಾಗುತ್ತದೋ ಅದೇ ರೀತಿಯ ಕ್ರಮಕ್ಕೆ ಟ್ವಿಟ್ಟರ್ ಸಂಸ್ಥೆ ಕೂಡ ಹೊರತಲ್ಲ ಎಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ :ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

ಭಾರತದಲ್ಲಿ ದೂರು ಬಂದಾಗ ಸಂವಹನ ನಡೆಸಲು ಅಧಿಕಾರಿಯನ್ನು ನೇಮಿಸಬೇಕು ಸರ್ಕಾರ ಸೂಚಿಸಿತ್ತು. ಫೇಸ್‍ಬುಕ್, ಗೂಗಲ್ ಕಂಪನಿಗಳು ಸರ್ಕಾರದ ನಿರ್ಧಾರವನ್ನು ಒಪ್ಪಿ ಪಾಲಿಸುವುದಾಗಿ ಹೇಳಿದ್ದರೆ ಟ್ವಿಟ್ಟರ್ ನೇಮಕ ಮಾಡಿರಲಿಲ್ಲ. ಹೀಗಾಗಿ ಮೊದಲು ಇದ್ದ ಕಾನೂನು ರಕ್ಷಣೆ ರದ್ದುಗೊಂಡಿದೆ.

ಏನಿದು ಪ್ರಕರಣ?
ವೃದ್ಧ ಮುಸ್ಲಿಂ ವ್ಯಕ್ತಿ ಅಬ್ದುಲ್ ಸಮದ್ ಎಂಬುವವರ ಮೇಲೆ ಜೂನ್ 5ರಂದು ಗಾಜಿಯಾಬಾದ್‍ನಲ್ಲಿ ಆರು ಮಂದಿಯಿಂದ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಸಮದ್ ಅವರ ಗಡ್ಡವನ್ನು ಕತ್ತರಿಸುವ, ‘ವಂದೇ ಮಾತರಂ’ ಮತ್ತು ‘ಜೈ ಶ್ರೀರಾಮ್’ ಎಂದು ಪಠಿಸುವಂತೆ ಬಲವಂತ ಪಡಿಸುವ ದೃಶ್ಯ ವಿಡಿಯೋದಲ್ಲಿತ್ತು. ಈ ವಿಡಿಯೋ ಕೋಮು ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದೆ ಎಂದು ಬರೆದು ಜನ ಟ್ವೀಟ್ ಮಾಡಿದ್ದರು.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆಗೆ ಇಳಿದಾಗ ಸತ್ಯ ಪ್ರಕಟವಾಗಿತ್ತು. ಈ ಗಲಾಟೆ ಕೋಮು ವಿಚಾರ ನಡೆದ ಗಲಾಟೆಯಲ್ಲ. ಆಮ್ಲೇಟ್ ವಿಚಾರಕ್ಕೆ ಈ ಗಲಾಟೆ ನಡೆದಿತ್ತು. ಅಬ್ದುಲ್ ಸಮದ್ ಮೇಲೆ ಹಲ್ಲೆ ನಡೆಸಿದವರಲ್ಲಿ ಎರಡೂ ಸಮುದಾಯದವರಿದ್ದರು. ಇದರಲ್ಲಿ ಯಾವ ಕೋಮು ಆಯಾಮ ಇಲ್ಲ ಎಂದು ಪೊಲೀಸರು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಯಾರ ಮೇಲೆ ಎಫ್‍ಐಆರ್?
ಗಾಜಿಯಾಬಾದ್‍ನ ಲೋನಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪತ್ರಕರ್ತಕರಾದ, ಸಬಾ ನಕ್ವಿ, ರಾಣಾ ಅಯ್ಯುಬ್, ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಜೊತೆಗೆ ಜತೆಗೆ ಆನ್‍ಲೈನ್ ಮಾಧ್ಯಮ ‘ದಿ ವೈರ್’, ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಶಮಾ ಮೊಹಮೆದ್ ಮತ್ತು ಮಸ್ಕೂರ್ ಉಸ್ಮಾನಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಉದ್ದೇಶಪೂರ್ವಕವಾಗಿ ಘಟನೆಗೆ ಕೋಮುಬಣ್ಣ ಹಚ್ಚಿದ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕೋಮು ಭಾವನೆಯನ್ನು ಕೆರಳಿಸುವ ಟ್ವೀಟ್ ಆಗಿದ್ದರೂ ಅದನ್ನ ಅಳಿಸದ ಕಾರಣ ಟ್ವಿಟ್ಟರ್ ಕಂಪನಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ.

ಅಧಿಕಾರಿ ನೇಮಕ:
ಭಾರತದಲ್ಲಿ ಮಧ್ಯಂತರ ಮುಖ್ಯ ಅಹವಾಲು ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ಟ್ವಿಟ್ಟರ್ ಮಂಗಳವಾರ ಸಂಜೆ ತಿಳಿಸಿತ್ತು. ಕೂ, ಗೂಗಲ್, ಫೇಸ್‍ಬುಕ್ ಕಂಪನಿಗಳು ಭಾರತ ಕಾನೂನುಗಳನ್ನು ಪಾಲಿಸುವುದಾಗಿ ಹೇಳಿದೆ. ಆದರೆ ಭಾರತ ಸರ್ಕಾರ ನೋಟಿಸ್ ಜಾರಿ ಮಾಡಿದ್ದರೂ ಟ್ವಿಟ್ಟರ್ ನಿಯಮಗಳನ್ನು ಪಾಲನೆ ಮಾಡಿರಲಿಲ್ಲ.

Click to comment

Leave a Reply

Your email address will not be published. Required fields are marked *

Advertisement
Advertisement