Connect with us

Latest

ಜಿಡಿಪಿ ದರ 7.2%ಕ್ಕೆ ಏರಿಕೆ- ಚೀನಾವನ್ನು ಹಿಂದಿಕ್ಕಿದ ಭಾರತ

Published

on

ನವದೆಹಲಿ: ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ನಂತರ ತೀವ್ರವಾಗಿ ಕುಸಿತಗೊಂಡಿದ್ದ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾದ ಮೂರನೇ ತ್ರೈಮಾಸಿಕದಲ್ಲಿ ಏರಿಕೆ ಆಗಿದೆ.

ಆಕ್ಟೋಬರ್, ನವೆಂಬರ್, ಡಿಸೆಂಬರ್ ಅವಧಿಯ ಜಿಡಿಪಿ ದರ 7.2% ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ. ಕಳೆದ ವರ್ಷದ ಅರಂಭದಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಅತ್ಯಂತ ಕನಿಷ್ಠ ಮಟ್ಟ 5.7% ದಾಖಲಿಸುವ ಮೂಲಕ ಕುಸಿದಿತ್ತು. ಅಲ್ಲದೇ ನೋಟು ರದ್ದತಿಯ ಬಳಿಕ ಜಿಡಿಪಿ ಪ್ರಗತಿ ಶೇ 1.3 ರಷ್ಟು ಇಳಿಕೆ ಕಂಡಿತ್ತು.

ದೇಶದ ಜಿಡಿಪಿ ಬೆಳವಣಿಗೆ ದರ ಕುರಿತಂತೆ ಹಲವು ಆರ್ಥಿಕ ಸಮೀಕ್ಷೆಗಳು ನೀಡಿದ್ದ ಜಿಡಿಪಿ ಬೆಳವಣಿಗೆ ದರದ ಅಂದಾಜು ಮಟ್ಟವನ್ನು ದಾಟಿ ಆರ್ಥಿಕ ಪ್ರಗತಿ ಕಂಡಿದೆ. ಅದರಲ್ಲೂ ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಂಡಿದೆ. ದೇಶದ ಪ್ರಮುಖ 35 ಆರ್ಥಿಕ ಸಮೀಕ್ಷೆಗಳು ಆಕ್ಟೋಬರ್- ಡಿಸೆಂಬರ್ ನಡುವಿನ ತ್ರೈಮಾಸಿಕದ ಬೆಳವಣಿಗೆ 6.9% ರಷ್ಟು ಇರಲಿದೆ ಎಂದು ಅಂದಾಜು ಮಾಡಿತ್ತು.

ಮಾರ್ಚ್ 31 2018 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಹಿಂದೆ ಹೊಂದಿದ್ದ ಅರ್ಥಿಕ ಬೆಳವಣಿಗೆ ದರ 6.5% ಕ್ಕಿಂತ 6.6% ಕ್ಕೆ ಹೆಚ್ಚಳಗೊಂಡಿದೆ. ಇದರೊಂದಿಗೆ ವಿಶ್ವ ಮಟ್ಟದಲ್ಲಿ ಚೀನಾ ನಂತದ ಅತ್ಯಂತ ಹೆಚ್ಚು ಆರ್ಥಿಕ ಬೆಳವಣಿಗೆ ದರ ಹೊಂದಿರುವ ದೇಶವಾಗಿದೆ. ಡಿಸೆಂಬರ್ ಗೆ ಮುಕ್ತಾಯಗೊಂಡ ಅವಧಿಯಲ್ಲಿ ಚೀನಾ ದರ 6.8% ರಷ್ಟಿತ್ತು.

ಪ್ರಸ್ತುತ ದೇಶದ ಅರ್ಥಿಕ ದರ ಬೆಳವಣಿಕೆ ಏರಿಕೆ ಆಗಿರುವುದನ್ನು ಗಮನಿಸಿದ ಆರ್ಥಿಕ ತಜ್ಞರು ಮುಂದಿನ 2018 ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ದರ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜಿಎಸ್‍ಟಿ ಜಾರಿಗೆ ಆದ ಬಳಿಕ ಕಡಿಮೆ ಆಗಿದ್ದ ಜಿಡಿಪಿ ದರ ಮುಂದಿನ ಆರ್ಥಿಕ ತ್ರೈಮಾಸಿಕದಲ್ಲಿ 7.6% ರಷ್ಟು ಹೆಚ್ಚಳವಾಗಲಿದೆ ಎಂದು ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ ನ ನಿರ್ದೇಶಕರಾದ ಅನಿತಾ ಗಾಂಧಿ ಹೇಳಿದ್ದಾರೆ. ಅಲ್ಲದೇ ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪ್ರಕಾರ 2019 ರ ಭಾರತ ಆರ್ಥಿಕ ಪ್ರಗತಿ 7.8% ಗೆ ಹೆಚ್ಚಳವಾಗಲಿದ ಎಂದು ತಿಳಿಸಿದೆ. 2018 ರಲ್ಲಿ ವರ್ಷದಲ್ಲಿ ಭಾರತದ ಜಿಡಿಪಿ ದರ 7.4% ಕ್ಕೆ ಏರಿಕೆ ಆಗಲಿದ್ದು, ಈ ವೇಳೆ ಚೀನಾ 6.8% ರಷ್ಟು ಹೊಂದಿರಲಿದೆ ಎಂದು ಐಎಂಎಫ್ ಹೇಳಿದೆ.

ಯಾವ ಅವಧಿಯಲ್ಲಿ ಎಷ್ಟಿತ್ತು?
ಮಾರ್ಚ್ 2016 – 9.2%
ಜೂನ್ 2016 – 7.9%
ಸೆಪ್ಟೆಂಬರ್ 2016 – 7.5%
ಡಿಸೆಂಬರ್ 2016 – 7%
ಮಾರ್ಚ್ 2017 – 6.1%
ಜೂನ್ 2017 – 5.7%
ಸೆಪ್ಟೆಂಬರ್ 2017 – 6.5%
ಡಿಸೆಂಬರ್ 2017 -7.2%