Wednesday, 15th August 2018

Recent News

ಚಿಕ್ಕಬಳ್ಳಾಪುರದ ಕೈ ಶಾಸಕನಿಗೆ ಸಚಿವ ಸ್ಥಾನ-ಜೆಡಿಎಸ್ ಶಾಸಕನಿಗೆ ಸಿಗಲಿಲ್ಲ ಮಂತ್ರಿಗಿರಿ..!

ವಿಶೇಷ ವರದಿ
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಜಿಲ್ಲಾ ಮಹಿಳಾಧ್ಯಕ್ಷೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನ, ಹೀಗೆ ಎಲ್ಲವನ್ನು ತನ್ನೊಡಲಿನಲ್ಲಿ ಇರಿಸಿಕೊಂಡುಡಿರುವ ಗೌರಿಬಿದನೂರು ಕಾಂಗ್ರೆಸ್ ಶಕ್ತಿಯಾಗಿರುಗ ಶಾಸಕ ಎನ್.ಎಚ್.ಶಿವಶಂಕರ್ ರೆಡ್ಡಿ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನವೂ ಈ ಕ್ಷೇತ್ರಕ್ಕೆ ದಕ್ಕಿದೆ. ಜಿಲ್ಲೆಯಲ್ಲಿ ಸಂತಸ ಮೂಡಿಸಿದ್ದರೆ, ಎಲ್ಲ ಹುದ್ದೆಗಳು ಗೌರಿಬಿದನೂರು ಪಾಲಾಗುತ್ತಿದೆ ಎಂಬ ಅಸಮಾಧಾನದ ಮಾತುಗಳು ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರಿಂದ ಕೇಳಿಬರುತ್ತಿದೆ.

ಶಿವಶಂಕರ್ ರೆಡ್ಡಿ ಯಾರು?
ಗೌರಿಬಿದನೂರು ಸಮೀಪದ ಎಚ್.ನಾಗಸಂದ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎನ್.ಎಸ್.ಹನುಮಂತರೆಡ್ಡಿ ಹಾಗೂ ಸುಭಾಷಿಣಮ್ಮ ಅವರ ದಂಪತಿಯ ಹಿರಿಯ ಪುತ್ರರಾಗಿ 1954ರಲ್ಲಿ ಎನ್.ಎಚ್.ಶಿವಶಂಕರ್ ರೆಡ್ಡಿ ಜನಿಸಿದರು. 1973ರಲ್ಲಿ ಬಿಎಸ್‍ಸಿ ಅಗ್ರಿ ವಿದ್ಯಾಭ್ಯಾಸ ಮುಗಿಸಿ, 1978ರಲ್ಲಿ ನಾಗಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. 1981ರಿಂದ 1986ರ ವರೆಗೆ ಚಿಕ್ಕಕುರುಗೊಡು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1985 ರಿಂದ 1990 ರ ವರೆಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಾಗಸಂದ್ರದಲ್ಲಿ ಸೇವೆ ಸಲ್ಲಿಸಿದ್ದರು. 1987ರಿಂದ 1992 ರವರಗೆ ದೊಡ್ಡಕುರುಗೊಡು ಮಂಡಲ ಪಂಚಾಯತಿ ಅಧ್ಯಕ್ಷರಾಗಿದ್ದರು. 1995 ರಲ್ಲಿ ತಾಲೂಕು ಪಂಚಾಯತಿ ಸದಸ್ಯರಾಗಿದ್ದ ಇವರು, 1997ರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ತದನಂತರ ಸತತ 4 ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿ, ಒಟ್ಟು 5 ಬಾರಿ ಶಾಸಕರಾಗುವ ಮೂಲಕ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದಾರೆ. ಕಳೆದ ಬಾರಿಯ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ಸಚಿವ ಸ್ಥಾನದ ಬದಲು ವಿಧಾನಭೆಯ ಉಪಸಭಾಧ್ಯಕ್ಷ ಸ್ಥಾನ ದೊರೆತಿತ್ತು. ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಅವರಿಗೆ ದಕ್ಕಿದೆ.

ಜಿಲ್ಲೆಯ ಸಚಿವ ಸ್ಥಾನದ ಇತಿಹಾಸ:
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಅಯ್ಕೆಯಾಗಿದ್ದರು. ಆದರೆ ಯಾರೊಬ್ಬರಿಗೂ ಸಚಿವ ಸ್ಥಾನ ದೊರೆತಿರಲಿಲ್ಲ. ಈ ಬಾರಿ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಒಲಿದಿರುವುದು ವಿಶೇಷ. ಇನ್ನು ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿದ್ದ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ನಿರಾಸೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ನಡೆಯಬಹುದಾದ ರಾಜಕೀಯ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ.

ಗೌರಿಬಿದನೂರು ಕ್ಷೇತ್ರದ 2ನೇ ಸಚಿವರು:
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಜೈನ ಸಮುದಾಯದ ಆರ್.ಎನ್.ಲಕ್ಷ್ಮೀಪತಿ ಅವರು ಸಣ್ಣ ನೀರಾವರಿ ಇಲಾಖೆಯ ಸಚಿವರಾಗಿ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದರು. ಅಂದಿನಿಂದ ಇಲ್ಲಿಯವರೆಗೂ ಗೌರಿಬಿದನೂರು ಕ್ಷೇತ್ರಕ್ಕೆ ಸಚಿವ ಸ್ಥಾನ ದಕ್ಕಿರಲಿಲ್ಲ. ಇದೀಗ ಶಾಸಕ ಶಿವಶಂಕರ್ ರೆಡ್ಡಿ ಅವರು ಸಚಿವರಾಗಿರುವುದು ಕ್ಷೇತ್ರದ ವಿಶೇಷಗಳಲ್ಲಿ ಒಂದು. ಈ ಮೊದಲು ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದ ಶಿವಶಂಕರ್ ರೆಡ್ಡಿ ಸಚಿವ ಸ್ಥಾನಕ್ಕೆ ಪಕ್ಷದ ವರಿಷ್ಠರ ಮೊರೆಹೋಗಿದ್ದರು.

ಶಿವಶಂಕರ್ ರೆಡ್ಡಿಗೆ ವೀರಪ್ಪ ಮೊಯ್ಲಿ ಕೃಪಾಕಟಾಕ್ಷ:
ಶಿವಶಂಕರ್ ರೆಡ್ಡಿ ಪರವಾಗಿ ಸಂಸದ ವೀರಪ್ಪ ಮೊಯ್ಲಿ ಅವರು ಬ್ಯಾಂಟಿಗ್ ಮಾಡಿ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಸಫಲರಾಗಿದ್ದಾರೆ ಎಂಬ ಮಾತುಗಳು ಪಕ್ಷದ ಮುಖಂಡರಿಂದಲೇ ಕೇಳಿಬಂದಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನಿಗಯಾಗಿದೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಹೀಗಾಗಿ ಹಿರಿಯ ಶಾಸಕರಿಗೆ ಸುಧಾಕರ್ ಅವರ ಮೇಲೆ ಮುನಿಸು ಶುರುವಾಗಿತ್ತು. ಆದರೆ, ಇದೀಗ ಲೆಕ್ಕಚಾರಗಳೆಲ್ಲವು ಉಲ್ಟಾ ಹೊಡೆದಿದ್ದು, ಗೌರಿಬಿದನೂರು ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿರುವ ಮಾದರಿಯಲ್ಲಿಯೇ ಜಿಲ್ಲೆಯ ಉಸ್ತುವಾರಿ ಹೊಣೆ ಹೊರುವ ನಿರೀಕ್ಷೆ ದಟ್ಟವಾಗಿದೆ.

14 ವರ್ಷಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿದ್ದ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಈ ಬಾರಿಯು ಜಯಗಳಿಸಿದ್ದಾರೆ. ಇವರ ಗೆಲುವಿನ ಬೆನ್ನಲ್ಲೇ ಸಚಿವ ಸ್ಥಾನದ ಲಾಬಿಯೂ ಹೆಚ್ಚಾಗಿತ್ತು. ವಿ.ಮುನಿಯಪ್ಪ ಅವರು ತಮ್ಮ ಹಿರಿತನ, ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ಎದುರು ನೋಡುತ್ತಿದ್ದರೆ, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸುಧಾಕರ್ ಹೆಸರು ನಮೂದಿಗೊಂಡಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ಜಿಲ್ಲೆಯಲ್ಲಿ ಕಾವೇರಿತ್ತು. ಇದಲ್ಲದೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಹ ಸುಧಾಕರ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇನ್ನು ಸಚಿವ ಸ್ಥಾನಕ್ಕಾಗಿ ಶಿವಶಂಕರ್ ರೆಡ್ಡಿ ಅವರ ಹಿಂಬಾಲಕರು ಇತ್ತೀಚೆಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನೋಡಲು ದೆಹಲಿಗೆ ತೆರಳಿದ್ದರು. ರೆಸಾರ್ಟ್ ವಾಸ ಮುಗಿದ ಕೂಡಲೇ ಶಿವಶಂಕರ್ ರೆಡ್ಡಿ ಸಹ ದೆಹಲಿ ಬಾಗಿಲು ತಟ್ಟಿದ್ದರು. ರಾಹುಲ್ ಗಾಂಧಿ ಭೇಟಿಯಾಗಲು ಸಾಧ್ಯವಾಗದೇ ಸಂಸದ ವೀರಪ್ಲ ಮೊಯ್ಲಿ ಅವರಲ್ಲಿ ಬೇಡಿಕೆ ಇಟ್ಟಿದ್ದರು. ಅಂತು-ಇಂತು ಕೊನೆಗೆ ಶಿವಶಂಕರ್ ರೆಡ್ಡಿ ಅವರೇ ಸಚಿವರಾಗಿ ಆಯ್ಕೆಯಾಗಿರುವುದು ಕೆಲವರಿಗೆ ಹುಳಿ-ಸಿಹಿ ಅನುಭವ ನೀಡಿದೆ.

ಜೆಡಿಎಸ್ ಶಾಸಕನಿಗಿಲ್ಲ ಸಚಿವ ಸ್ಥಾನ:
ಮತ್ತೊಂದೆಡೆ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ, ರೆಡ್ಡಿ ಸಮುದಾಯ, ಹಾಗೂ ಜಿಲ್ಲೆಯ ಜೆಡಿಎಸ್ ನ ಏಕೈಕ ಶಾಸಕರಾಗಿರೋ ಜೆ.ಕೆ.ಕೃಷ್ಣಾರೆಡ್ಡಿಗೂ ಸಚಿವ ಸ್ಥಾನ ಕೈ ತಪ್ಪಿದೆ. ಜಿಲ್ಲೆ, ಜಾತಿ, ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜೆ.ಕೆ.ಕೃಷ್ಣಾರೆಡಿಗೂ ನಿರಾಸೆಯಾಗಿದೆ. ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಅಸಮಾಧಾನಗೊಂಡಿದ್ದಾರೆ.

ಬಾಗೇಪಲ್ಲಿಗೂ ಇಲ್ಲ ಸ್ಥಾನ..!
ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬಾಗೇಪಲ್ಲಿ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೂ ಕನಿಷ್ಟ ಒಂದು ಬಾರಿಯಾದರೂ, ಸಚಿವ ಸ್ಥಾನ ಲಭಿಸಿದೆ. ಆದರೆ, ಸ್ವಾತಂತ್ರ್ಯ ನಂತರದಿಂದ ಈ ವರೆಗೂ ಬಾಗೇಪಲ್ಲಿ ಕ್ಷೇತ್ರಕ್ಕೆ ಮಂತ್ರಿ ಸೌಭಾಗ್ಯವೇ ದಕ್ಕಿಲ್ಲ. ಗುಂಡಿಬಂಡೆ, ಬಾಗೇಪಲ್ಲಿ 2 ತಾಲೂಕುಗಳನ್ನು ಒಳಗೊಂಡಿರುವ ಈ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರೂ, ಕ್ಷೇತ್ರವನ್ನು ಬಲ ಪಡಿಸುವ ಕಾರ್ಯಕ್ಕೆ ಯಾರೊಬ್ಬರು ಮುಂದಾಗಿಲ್ಲ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪೇಪರ್ ಮಿನುಯಪ್ಪ, ರೇಣುಕಾ ರಾಜೇಂದ್ರನ್ ಅವರುಗಳು ಮಂತ್ರಿಗಿರಿ ಪಡೆದುಕೊಂಡಿದ್ದರು. ಚಿಂತಾಮಣಿ ಕ್ಷೇತ್ರದಲ್ಲಿ ಗೃಹ ಖಾತೆಯಿಂದ ಹಿಡಿದು ಸಮಾಜ ಕಲ್ಯಾಣ ಇಲಾಖೆ ವರೆಗೂ ಸಚಿವರು ಆಯ್ಕೆಗೊಂಡಿದ್ದರು. ಗೃಹ ಸಚಿವರಾಗಿದ್ದ ಚೌಡರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕೆ.ಎನ್.ಕೃಷ್ಣಾರೆಡ್ಡಿ ಅಧಿಕಾರ ಅನುಭವಿಸಿದ್ದರು.

Leave a Reply

Your email address will not be published. Required fields are marked *