Sunday, 19th August 2018

ಗೌರಿ ಹತ್ಯೆ ಕೇಸ್: ಆರೋಪಿ ವಾಗ್ಮೋರೆಯಿಂದ ಎಸ್‍ಐಟಿ ತನಿಖೆ ದಾರಿ ತಪ್ಪಿಸೋ ಯತ್ನ!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬಂಧನಕ್ಕೆ ಒಳಗಾಗಿರುವ ಶಂಕಿತ ಆರೋಪಿ ಪರಶುರಾಮ್ ವಾಗ್ಮೋರೆ ತನಿಖೆಯನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವ ವಿಚಾರ ಎಸ್‍ಐಟಿ ಮೂಲಗಳಿಂದ ತಿಳಿದುಬಂದಿದೆ.

ಪರಶುರಾಮ್ ಸೆಪ್ಟಂಬರ್ 05, 2017ರಂದು ಬೆಂಗಳೂರಿಗೆ ಬಂದು ಕೊಲೆಗೈದು ನಂತರ ಸಿಂಧಗಿ ತೆರಳಿದ್ದ. ಆದರೆ ಹತ್ಯೆಗೆ ಬಳಸಿದ್ದ ಗನ್ ಮಾತ್ರ ಇದೂವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ಪರಶುರಾಮ್ ಮಾತ್ರ ಗನ್ ಎಲ್ಲಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡದೇ ಸತಾಯಿಸುತ್ತಿದ್ದಾನೆ ಎನ್ನುವ ವಿಚಾರವನ್ನು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇನ್ನೋರ್ವ ಆರೋಪಿ ಅಮೋಲ್ ಕಾಳೆ ರಾಜರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ. ಗೌರಿ ಹತ್ಯೆಯ ಬಳಿಕ ಪರಶುರಾಮ್ ನೇರವಾಗಿ ಅಮೋಲ್ ವಾಸವಿದ್ದ ಮನೆಗೆ ತೆರಳಿ ಗನ್ ಹ್ಯಾಂಡವರ್ ಮಾಡಿದ್ದಾನೆ. ಆದರೆ ಸದ್ಯ ಎಸ್‍ಐಟಿ ಅಧಿಕಾರಿಗಳಿಗೆ ಅಮೋಲ್ ವಾಸವಿದ್ದ ಮನೆಯನ್ನು ತೋರಿಸಲು ಪರಶುರಾಮ್ ಹಿಂದೇಟು ಹಾಕುತ್ತಿದ್ದಾನಂತೆ. ನಾನು ಬೆಂಗಳೂರಿನಲ್ಲಿ ಇದ್ದಿದ್ದೆ ಎರಡು ದಿನ. ನನಗೆ ಸರಿಯಾಗಿ ದಾರಿ ಗೊತ್ತಾಗುತ್ತಿಲ್ಲ ಎಂದು ಮನೆ ತೋರಿಸಲು ಪರಶುರಾಮ್ ಸತಾಯಿಸುತ್ತಿದ್ದು, ಪೊಲೀಸರನ್ನು ಸುತ್ತಿಸಿ ಸುತ್ತಿಸಿ ಹೈರಾಣು ಮಾಡುತ್ತಿದ್ದಾನೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಪರಶುರಾಮ್ ಹೇಳಿಕೆಯನ್ನು ಆಧರಿಸಿ ಪೊಲೀಸರು ಅಮೋಲ್ ಕಾಳೆಯನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಅಮೋಲ್ ಪೊಲೀಸ್ ಕಸ್ಟಡಿ ಗುರುವಾರ ಅಂತ್ಯವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡದೇ ಸತಾಯಿಸುತ್ತಿದ್ದಾನೆ. ಪರಶುರಾಮ್ ಮಾತ್ರ ಹತ್ಯೆಯ ಬಳಿಕ ಗನ್ ನೇರವಾಗಿ ಅಮೋಲ್‍ಗೆ ಹಸ್ತಾಂತರಿಸೋದಾಗಿ ಹೇಳಿಕೆ ನೀಡಿದ್ದಾನೆ. ಗುರವಾರ ಅಮೋಲ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಗನ್ ರಿಕವರಿಗೆ ಅಧಿಕಾರಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಮಂಪರು ಪರೀಕ್ಷೆ: ಬಂಧಿತ ಎಲ್ಲ ಆರೋಪಿಗಳು ತಮ್ಮ ಹೇಳಿಕೆಗಳನ್ನು ಬದಲಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಸ್‍ಐ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಕೋರ್ಟ್ ಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ಕೋರಿ ಮನವಿ ಸಲ್ಲಿಸುವ ಸಾಧ್ಯತೆಗಳಿವೆ. ಆರೋಪಿಗಳಾದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್ ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ್ ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ ಎಲ್ಲರೂ ಸಮರ್ಪಕ ಮಾಹಿತಿಯನ್ನು ನೀಡುತ್ತಿಲ್ಲ.

ಈ ಹಿಂದೆ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಮಂಪರ ಪರೀಕ್ಷೆಗೆ ಒಳಪಡಿಸಲು ಎಸ್‍ಐಟಿ ಮನವಿ ಮಾಡಿತ್ತು. ಕೋರ್ಟ್ ನವೀನ್ ಮಂಪರು ಪರೀಕ್ಷೆಗೆ ಅನುಮತಿ ಸಹ ನೀಡಿತ್ತು. ಆದರೆ ಗುಜರಾತ್ ಎಫ್ ಎಸ್ ಎಲ್ ಗೆ ತೆರಳಿದಾಗ ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಒಪ್ಪಿರಲಿಲ್ಲ. ಹೀಗಾಗಿ ಎಸ್ ಐಟಿ ತಂಡ ಬೆಂಗಳೂರಿಗೆ ವಾಪಸ್ ಆಗಿದ್ದರು.

ಯಾರು ಈ ಪರಶುರಾಮ್ ವಾಗ್ಮೋರೆ?: ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ನಿವಾಸಿ ಪರಶುರಾಮ್ ವಾಗ್ಮೋರೆ. ವಯಸ್ಸು 26, ಕಟ್ಟಾ ಹಿಂದೂವಾದಿಯಾಗಿದ್ದು, ಶ್ರೀರಾಮಸೇನೆ, ಹಿಂದೂ ಜಾಗೃತಿ ವೇದಿಕೆಯಲ್ಲೂ ಗುರುತಿಸಿಕೊಂಡಿದ್ದನು. ಈ ಹಿಂದೆ ಸಿಂಧಗಿ ತಹಶೀಲ್ದಾರ್ ಕಚೇರಿ ಬಳಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್ ಹೆಸರು ಕೇಳಿ ಬಂದಿತ್ತು. ಪರಶುರಾಮ್ ಒಬ್ಬ ಶಾರ್ಪ್ ಶೂಟರ್ ಆಗಿದ್ದು, ಅಮೋಲ್ ಕಾಳೆ, ಮನೋಹರ್ ಯವಡೆಗೆ ಎಂಬವರಿಗೆ ತರಬೇತಿ ನೀಡಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಸಂಬಂಧಿಕರ ಅಂಗಡಿಯಲ್ಲಿ ಪರಶುರಾಮ್ ಕೆಲಸ ಮಾಡಿಕೊಂಡಿದ್ದ.


ಹತ್ಯೆಯ ಸಂಚು: ಸೆಪ್ಟಂಬರ್ 5, 2017ರಂದು ಗೌರಿ ಲಂಕೇಶ್ ಹತ್ಯೆಯಾಗಿತ್ತು. ಹತ್ಯೆಗೂ ಮುನ್ನವೇ ಎರಡು ತಿಂಗಳು ಮೊದಲ ಸ್ಥಳದ ಪರಿಶೀಲನೆ ನಡೆಸಿದ್ದರು. ಗೌರಿ ಲಂಕೇಶ್‍ವರನ್ನು ಕೊಲೆ ಮಾಡಲೆಂದೇ ಪರಶುರಾಮ್ ಸಿಂಧಗಿಯಿಂದ ಬೆಂಗಳೂರಿಗೆ ಆಗಮಿಸಿದ್ದನು. ಹತ್ಯೆಗೂ ಹಿಂದಿನ ದಿನ ಅಂದರೆ ಸೆಪ್ಟಂಬರ್ 4ರಂದು ಪರಶುರಾಮ್ ಗೆ ಗನ್ ನೀಡಲಾಗಿತ್ತು.

Leave a Reply

Your email address will not be published. Required fields are marked *