Thursday, 12th December 2019

ಮೋದಿ ಹಾಗೂ ಅಮಿತ್ ಶಾ ಅವರ ಕುದುರೆ ವ್ಯಾಪಾರ ಯಶಸ್ವಿಯಾಗಲ್ಲ – ಎಚ್.ಕೆ ಪಾಟೀಲ್

ಗದಗ: ರಾಜ್ಯದಲ್ಲಿನ ಈ ಬೆಳವಣಿಗೆಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕುದುರೆ ವ್ಯಾಪಾರವೇ ಕಾರಣ. ಬಿಜೆಪಿಯವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಶಾಸಕ ಎಚ್.ಕೆ ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅವರಿಂದ ಅರಾಜಕತೆ ಸೃಷ್ಟಿಯಾಗಿದೆ. ಅತೃಪ್ತರು ವಾಪಸ್ ಬರುತ್ತಾರೆ ಸರ್ಕಾರ ಉಳಿಯುತ್ತದೆ. ಮೈತ್ರಿ ಸರ್ಕಾರ ಉರುಳುವ ಮಾತೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅವರು ಶಾಸಕರಿಗೆ ಯಾವ ಷರತ್ತು ಹಾಕಿದ್ದಾರೆ ಎಂದು ದೇಶದ ಜನ ಹಾಗೂ ಸುಪ್ರಿಂ ಕೋರ್ಟ್ ನೋಡಬೇಕು. ಅತೃಪ್ತ ಶಾಸಕರ ನಡೆಯನ್ನು ಜನ ನೋಡುತ್ತಿದ್ದಾರೆ. ಜನರು ಮುಗ್ಧರಿರಬಹುದು ಆದರೆ ದಡ್ಡರಲ್ಲ. ಅತೃಪ್ತರು ಸ್ವಯಂ ಪ್ರೇರಿತರಾಗಿ ಮುಂಬೈಗೆ ಹೋಗಿಲ್ಲ. ಅತೃಪ್ತ ಶಾಸಕರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ದೂರಿದರು.

ಇದೇ ವೇಳೆ ಜಿಂದಾಲ್‍ಗೆ ಭೂಮಿ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಂ.ಬಿ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಇದನ್ನು ಎಂ.ಬಿ ಪಾಟೀಲ್ ಅವರೇ ಸ್ಪಷ್ಟಪಡಿಸಿದ್ದಾರೆ. ಇದರ ಕುರಿತು ತಪ್ಪು ಮಾಹಿತಿ ಹಂಚಿಕೆಯಾಗುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *