Connect with us

Corona

4 ತಿಂಗ್ಳಲ್ಲಿ ಸಂಗ್ರಹವಾಯ್ತು 18 ಸಾವಿರ ಟನ್ ಕೊರೊನಾ ವೈದ್ಯಕೀಯ ತ್ಯಾಜ್ಯ

Published

on

– ಮಹಾರಾಷ್ಟ್ರದಲ್ಲಿ 3,587 ಟನ್, ಕರ್ನಾಟಕದಲ್ಲಿ ಎಷ್ಟು?

ನವದೆಹಲಿ: ಜೂನ್ ನಿಂದ ಸೆಪ್ಟೆಂಬರ್ ವರೆಗೆ ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ದೇಶದಲ್ಲಿ 18 ಸಾವಿರಕ್ಕೂ ಅಧಿಕ ಟನ್ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆಯಾಗಿದೆ. ಇದರಲ್ಲಿ ಕೊರೊನಾ ಪೀಡಿತ ರಾಜ್ಯಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 3,587 ಟನ್ ತ್ಯಾಜ್ಯ ಸಂಗ್ರಹಣೆಯಾಗಿರುವ ಬಗ್ಗೆ ವರದಿಯಾಗಿದೆ.

ಕಳೆದ ನಾಲ್ಕು ತಿಂಗಳ 18,006 ಟನ್ ಪೈಕಿ ಸೆಪ್ಟೆಂಬರ್ ನಲ್ಲಿ 5,500 ಟನ್ ಕೋವಿಡ್-19 ವೈದ್ಯಕೀಯ ತ್ಯಾಜ್ಯ ಶೇಖರಣೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ನೀಡಿದ ಅಂಕಿ-ಸಂಖ್ಯೆ ಅನುಸಾರವಾಗಿ ಮಾಹಿತಿ ಕಲೆ ಹಾಕಲಾಗಿದೆ. ಈ ತ್ಯಾಜ್ಯದಲ್ಲಿ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಬ್ಲಡ್ ಬ್ಯಾಗ್, ಸೂಜಿ, ಸಿರಿಂಜ್ ಇನ್ನಿತರ ವಸ್ತುಗಳು ಸೇರಿವೆ.

ಕಳೆದ ನಾಲ್ಕು ತಿಂಗಳಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಿಂದಲೇ ಕೋವಿಡ್-19 ತ್ಯಾಜ್ಯ ಸಂಗ್ರಹಣೆಯಾಗಿದೆ. ಮಹಾರಾಷ್ಟ್ರ 3,587 ಟನ್, ತಮಿಳನಾಡು 1,737 ಟನ್, ಗುಜರಾತ 1,638 ಟನ್, ಕೇರಳ 1,516 ಟನ್, ಉತ್ತರ ಪ್ರದೇಶ 1,416 ಟನ್, ದೆಹಲಿ 1,400 ಟನ್, ಕರ್ನಾಟಕ 1,380 ಟನ್ ಮತ್ತು ಪಶ್ಚಿಮ ಬಂಗಾಳದಲ್ಲಿ 1,000 ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಈ ತ್ಯಾಜ್ಯವನ್ನು 198 ಘಟಕಗಳಿಂದ ವಿಲೇವಾರಿ ಮಾಡಲಾಗುತ್ತಿದೆ.

ಸೆಪ್ಟೆಂಬರ್ ನಲ್ಲಿ ಕೊರೊನಾ ಪ್ರಕರಣಗಳ ಜೊತೆಯಲ್ಲಿಯೇ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆಯೂ ಹೆಚ್ಚಾಗಿದೆ. ಸೆಪ್ಟೆಂಬರ್ ನಲ್ಲಿ ಗುಜರಾತಿನಲ್ಲಿ 622 ಟನ್ ಕಸ ಉತ್ಪತ್ತಿಯಾಗಿದೆ. ತಮಿಳನಾಡು 543 ಟನ್, ಮಹಾರಾಷ್ಟ್ರ 524 ಟನ್, ಉತ್ತರ ಪ್ರದೇಶ 507 ಟನ್, ಕೇರಳ 494 ಟನ್ ಮತ್ತು ದೆಹಲಿಯಲ್ಲಿ 383 ಟನ್ ತ್ಯಾಜ್ಯ ಸಂಗ್ರಹಣೆಯಾಗಿದೆ.

ಕಳೆದ 24 ಗಂಟೆಯಲ್ಲಿ 66,732 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 71,20,539ಕ್ಕೆ ಏರಿಯಾಗಿದೆ. ಇನ್ನೂ ಶನಿವಾರ ಒಂದೇ ದಿನ 816 ಮಂದಿ ಸಾವನ್ನಪ್ಪಿದ್ದಾರೆ. 71,20,539ರ ಪೈಕಿ 61,49,536 ಮಂದಿ ಈವರೆಗೂ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 8,61,853 ಸಕ್ರಿಯ ಪ್ರಕರಣಗಳಿವೆ. 24 ಗಂಟೆಯಲ್ಲಿ 816 ಮಂದಿ ಸಾವನ್ನಪ್ಪಿದ್ದು, ಈವರೆಗೂ ದೇಶದಲ್ಲಿ 01,09,150 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Click to comment

Leave a Reply

Your email address will not be published. Required fields are marked *

www.publictv.in