Connect with us

Latest

ಜನವರಿ 1 ರಿಂದ OTP ಮೂಲಕವೇ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ

Published

on

ನವದೆಹಲಿ: ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದೆ ಇರುವವರು ಜನವರಿ 1 ನಂತರ ತಮ್ಮ ಮೊಬೈಲ್ ನಲ್ಲಿ ಒನ್ ಟೈಮ್ ಪಾಸವಾರ್ಡ್ (OTP) ವಿಧಾನ ಮೂಲಕ ಆಧಾರ್ ಲಿಂಕ್ ಮಾಡುವ ಹೊಸ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ವಾಯ್ಸ್-ಗೈಡೆನ್ಸ್ ಮೂಲಕ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದ್ದು, ಈ ವ್ಯವಸ್ಥೆಯನ್ನು ಒಂದು ತಿಂಗಳ ಹಿಂದೆಯೇ ಗ್ರಾಹಕರ ಬಳಕೆಗೆ ನೀಡಬೇಕಾಗಿತ್ತು. ಆದರೆ ಟೆಲಿಕಾಂ ಕಂಪನಿಗಳು ಹಾಗೂ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (UIDAI) ನಡುವಿನ ಗೊಂದಲಗಳ ಹಿನ್ನೆಲೆಯಲ್ಲಿ ತಡವಾಗಿ ಜಾರಿಗೆ ಬರುತ್ತಿದೆ. ಇನ್ನು ದೇಶದಲ್ಲಿ ಸುಮಾರು 50 ಕೋಟಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಮಾಡಬೇಕಿದೆ.

ಸರ್ಕಾರವು ಸಾರ್ವಜನಿಕರ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು, ಆದರೆ ಎಲ್ಲರಿಗೂ ಟೆಲಿಕಾಂ ಸಂಸ್ಥೆಗಳ ಕಚೇರಿಗೆ ಆಧಾರ್ ಲಿಂಕ್ ಮಾಡುವುದು ಕಷ್ಟ ಸಾಧ್ಯ ಎಂದು ಹಲವರು ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಇದು ಬೃಹತ್ ಪ್ರಕ್ರಿಯೆಯಾಗಿದ್ದು, ಟೆಲಿಕಾಂ ಸಂಸ್ಥೆಗಳ ಕಚೇರಿಗೆ ತೆರಳಿ ಆಧಾರ್ ಲಿಂಕ್ ಮಾಡುವುದು ಕಷ್ಟ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಮೊಬೈಲ್ ಗ್ರಾಹಕರಿಗೆ ಫೆಬ್ರವರಿ ಮೊದಲ ವಾರದ ವರೆಗೂ ಆಧಾರ್ ಲಿಂಕ್ ಮಾಡುವ ಅವಕಾಶ ನೀಡಲಾಗಿದೆ. ನಂತರದಲ್ಲಿ ಆಧಾರ್ ಲಿಂಕ್ ಹೊಂದಿರದ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

OTP ವಿಧಾನ ಬಳಕೆ ಹೇಗೆ?
ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ನಿಂದ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ವ್ಯವಸ್ಥೆಗೆ ಕರೆ ಮಾಡಿ, ಅಲ್ಲಿನ ಸೂಚನೆಗಳನ್ನು ಪೂರ್ಣಗೊಳಿಸಿ ಆಧಾರ್ ಲಿಂಕ್ ಮಾಡಬಹುದು. ವಾಯ್ಸ್ ಕರೆಯ ನಂತರ ಮೊಬೈಲ್ ಸಂಖ್ಯೆಗೆ OTP ಸಂಖ್ಯೆ ಕಳುಹಿಸಿ ಕೊಡಲಾಗುತ್ತದೆ. ಈ ಸಂಖ್ಯೆಯನ್ನು ದಾಖಲಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಸೇವೆಯು ಇಂಗ್ಲಿಷ್, ಹಿಂದಿ ಹಾಗೂ ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಲಿದೆ.