Connect with us

Latest

ಗಮನಿಸಿ, ಜನವರಿ 1 ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ

Published

on

ನವದೆಹಲಿ: ಜನವರಿ 1, 2021ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿದೆ. 2021ರ ಜನವರಿಯಿಂದ ಇದು ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.

2017ರ ಡಿಸೆಂಬರ್‌ 1 ರಿಂದ ಮಾರಾಟವಾಗುವ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿತ್ತು. 2017ಕ್ಕಿಂತ ಮೊದಲು ಮಾರಾಟವಾಗಿದ್ದ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಈಗ ಈ ವಿನಾಯಿತಿಯನ್ನು ತೆಗೆಯಲಾಗಿದ್ದು ಎಲ್ಲ 4 ಚಕ್ರದ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್‌ ಅಳವಡಿಸಿರಬೇಕೆಂದು ಸರ್ಕಾರ ಸೂಚಿಸಿದೆ.

ಏಪ್ರಿಲ್‌ 2021 ರಿಂದ ಥರ್ಡ್‌ ಪಾರ್ಟಿ ವಿಮೆ ಮಾಡಿಸಬೇಕಿದ್ದರೂ ಫಾಸ್ಟ್‌ಟ್ಯಾಗ್‌ ಕಡ್ಡಾಯ. ಇದರ ಜೊತೆ ಹಳೆ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ನವೀಕರಣಕ್ಕೂ ಫಾಸ್ಟ್‌ ಟ್ಯಾಗ್‌ ಅಳವಡಿಸರಬೇಕು.

ಫಾಸ್ಟ್‌ಟ್ಯಾಗ್‌ ಇದ್ದರೆ ವಾಹನಗಳು ಸರಾಗವಾಗಿ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುತ್ತದೆ. ಸಮಯ ಮತ್ತು ಇಂಧನ ಉಳಿತಾಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. 2019ರ ಅಕ್ಟೋಬರ್ 1 ರಿಂದ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಏನಿದು ಫಾಸ್ಟ್‌ಟ್ಯಾಗ್‌?
ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ.

ಶುಲ್ಕ ಪಾವತಿ ಹೇಗೆ?
ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‍ಐಡಿ) ಆಧಾರಿತ ಫಾಸ್ಟ್‌ಟ್ಯಾಗನ್ನು ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟಿರಬೇಕಾಗುತ್ತದೆ.

ಎಲ್ಲ ಪ್ರಮುಖ ಬ್ಯಾಂಕುಗಳು ಫಾಸ್ಟ್‌ಟ್ಯಾಗ್‌ ಸೌಲಭ್ಯ ನೀಡುತ್ತಿದ್ದು, ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ನೋಂದಾಯಿತ ವಾಹನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಅಲ್ಲಿನ ರೀಡರ್, ಟ್ಯಾಗನ್ನು ರೀಡ್ ಮಾಡುತ್ತದೆ. ಆಗ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಆದರೆ ಖಾತೆಯಲ್ಲಿ ಮೊದಲೇ ಹಣ ಜಮೆಯಾಗಿರಬೇಕು. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.

ಎಲ್ಲಿ ಪಡೆಯಬೇಕು, ಹೇಗೆ ಪಡೆಯಬೇಕು?
ಫಾಸ್ಟ್‌ಟ್ಯಾಗನ್ನು ವಿವಿಧ ಬ್ಯಾಂಕುಗಳಲ್ಲಿ, ಎನ್‍ಎಚ್‍ಎಐ, ಟೋಲ್ ಪ್ಲಾಜಾ, ಆರ್ ಟಿಓ ಕಚೇರಿ, ಟ್ರಾನ್ಸ್ ಪೋರ್ಟ್ ಕೇಂದ್ರಗಳು, ಆನ್‌ಲೈನ್‌ ಶಾಪಿಂಗ್‌ ತಾಣದಿಂದ ಖರೀದಿಸಬಹುದು.

ಫಾಸ್ಟ್ ಟ್ಯಾಗ್ ಟೈಂಲೈನ್:
2014ರಲ್ಲಿ ಮುಂಬೈ ಅಹಮದಾಬಾದ್ ಸುವರ್ಣ ಚತುಷ್ಪತ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಫಾಸ್ಟ್ ಟ್ಯಾಗ್ ಜಾರಿ ಆಗಿತ್ತು. 2016ರಲ್ಲಿ ದೇಶದ 247(ಶೇ.70) ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ಬಂದಿತು. 2017ರ ನ.8 ರಂದು ಡಿಸೆಂಬರ್ ನಂತರ ಮಾರಾಟವಾಗುವ ಎಲ್ಲ ವಾಹನಗಳಲ್ಲಿ ಫಾಸ್ಟ್ ಕಡ್ಡಾಯವಾಗಿ ಇರಬೇಕೆಂದು ಆದೇಶ ಹೊರಡಿಸಲಾಯಿತು.

Click to comment

Leave a Reply

Your email address will not be published. Required fields are marked *

www.publictv.in