Connect with us

Crime

ಸ್ನೇಹಿತರು ಕರೆದರೆಂದು ಹೋದವ ಹೆಣವಾದ- ಮಂಡ್ಯದಲ್ಲಿ ಒಂದೇ ತಿಂಗಳಲ್ಲಿ 7 ಕೊಲೆ

Published

on

– ಗ್ರಾಮದ ಮಧ್ಯ ಭಾಗದಲ್ಲಿ ಭೀಕರವಾಗಿ ಕೊಚ್ಚಿ ಹತ್ಯೆ

ಮಂಡ್ಯ: ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಇತ್ತೀಚಿಗೆ ಮರ್ಡರ್ ಸಿಟಿಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 7 ಮಂದಿಯ ಹತ್ಯೆ ನಡೆದಿದೆ. ಕಳೆದ ರಾತ್ರಿಯೂ ಯವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ 25 ವರ್ಷದ ಅಭಿಷೇಕ್‍ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸ್ನೇಹಿತರು ಕರೆದರೆಂದು ಮನೆಯಿಂದ ಹೊರ ಹೋದವನು ಊರಿನ ಮಧ್ಯಭಾಗದಲ್ಲೇ ಹೆಣವಾಗಿದ್ದಾನೆ. ಘಟನೆಯಿಂದಾಗಿ ಜನರು ಬೆಚ್ಚಿಬಿದ್ದಿದ್ದಾರೆ.

ನಿನ್ನೆ ರಾತ್ರಿ 10 ಗಂಟೆಗೆ ಮನೆಗೆ ಬಂದ ಅಭಿಷೇಕ್ ಗೆ ತಾಯಿ ಊಟ ಬಡಿಸಿದ್ದಾರೆ. ಊಟ ಮಾಡುತ್ತಿದಂತೆ ಯಾರೋ ಪೋನ್ ಮಾಡಿದ್ದಾರೆ. ಬಳಿಕ ಎಂದಿನಂತೆ ರೇಷ್ಮೆ ಸಾಕಣೆ ಮನೆಯಲ್ಲಿ ಮಲಗುವುದಾಗಿ ಹೇಳಿ ಹೋದವನನ್ನು ಯಾರೊ ದುಷ್ಕರ್ಮಿಗಳು ತಲೆಯ ಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮುಂಜಾನೆ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದವರು ನೋಡಿದಾಗ ಕೊಲೆಯಾಗಿರುವುದು ತಿಳಿದಿದೆ.

ಅಭಿಷೇಕ್ ಸದಾ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ. ತಾನು ದುಡಿದ ಹಣವನ್ನೆಲ್ಲ ಗೆಳೆಯರೊಂದಿಗೆ ಸೇರಿ ಖರ್ಚು ಮಾಡಿಕೊಳ್ಳುತ್ತಿದ್ದನಂತೆ. ಹೆತ್ತವರು ಎಷ್ಟೇ ಬುದ್ಧಿವಾದ ಹೇಳಿದರೂ ಸ್ನೇಹಿತರ ಸಹವಾಸದಿಂದ ದೂರವಾಗಿರಲಿಲ್ಲ. ಶನಿವಾರವೂ ಬೆಳಗ್ಗೆ ಮನೆಯಿಂದ ಹೋದನು ರಾತ್ರಿ 10 ಗಂಟೆಗೆ ಬಂದಿದ್ದ. ರೇಷ್ಮೆ ಸಾಕಾಣಿಕೆ ಮನೆಗೆ ಮಲಗಲು ಹೋದವನನ್ನು ಯಾರೋ ಸ್ನೇಹಿತರೇ ಕರೆಸಿಕೊಂಡು ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಗ್ರಾಮದ ಮಧ್ಯ ಭಾಗದಲ್ಲೇ ನಡೆದ ಕೊಲೆಯಿಂದಾಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರ ಹತ್ಯೆ, ಇಟ್ಟಿಗೆ ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರ ಕೊಲೆ ಜನರ ಮನಸ್ಸಿಂದ ದೂರವಾಗುವ ಮುನ್ನವೇ ಮತ್ತೊಬ್ಬ ಯುವಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳೊಂದರಲ್ಲೇ 7ಕ್ಕೂ ಹೆಚ್ಚು ಮರ್ಡರ್ ನಡೆದಂತಾಗಿದೆ.

Click to comment

Leave a Reply

Your email address will not be published. Required fields are marked *