Tuesday, 23rd July 2019

Recent News

ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಹೊಸ ಗುಡ್ಡದಹಳ್ಳಿಯ ಬಳಿ ತಡರಾತ್ರಿ ನಡೆದಿದೆ.

ವರುಣ್ ಕೊಲೆಯಾದ ದುರ್ದೈವಿ. ಈತ ತನ್ನ ಸ್ನೇಹಿತ ರವಿ ಎಂಬಾತನ ಜೊತೆ ಹಣಕಾಸಿನ ವ್ಯವಹಾರ ಹೊಂದಿದ್ದನು. ಭಾನುವಾರ ರಾತ್ರಿ ಸುಮಾರು 10.30ಕ್ಕೆ ರವಿ ಮತ್ತು ವರುಣ್ ಮದ್ಯ ಸೇವಿಸಲು ಹೊಸ ಗುಡ್ಡದಹಳ್ಳಿ ಬಳಿಯ ಬಾರ್ ಒಂದಕ್ಕೆ ತೆರಳಿದ್ದರು.

ಈ ವೇಳೆ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ಆರಂಭವಾಗಿದೆ. ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಬಳಿಕ ರವಿ, ವರುಣ್ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇತ್ತ ರಕ್ತಸ್ರಾವದಿಂದ ನರಳಾಡುತ್ತಿದ್ದ ವರುಣ್‍ನನ್ನು ಸ್ಥಳೀಯರು ಬ್ಯಾಟರಾಯನಪುರ ಬಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವರುಣ್ ತಡರಾತ್ರಿ 11.30ಕ್ಕೆ ಮೃತಪಟ್ಟಿದ್ದಾನೆ ಎಂದು ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾತೋರ್ ಹೇಳಿದ್ದಾರೆ.

ಮೃತ ವರುಣ್ ಟ್ರ್ಯಾಕ್ಟರ್ ಚಾಲಕನಾಗಿದ್ದು, ಕಳೆದ ಕೆಲದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದನು. ಈತನ ಬಳಿಯಿದ್ದ ವಾಹನವೊಂದನ್ನು ಆರೋಪಿ ರವಿ ಪಡೆದಿದ್ದು, ವ್ಯಕ್ತಿಯೊಬ್ಬರ ಬಳಿ ಅಡಮಾನ ಇಟ್ಟಿದ್ದನು. ಈ ಕಾರಣಕ್ಕಾಗಿ ವರುಣ್ ಮತ್ತು ಆರೋಪಿ ರವಿ ನಡುವೆ ವೈಮನಸ್ಸು ಏರ್ಪಟ್ಟಿತ್ತು ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಆರೋಪಿ ರವಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *