Connect with us

Bengaluru City

ಗೆಳತಿಗೆ ಪತ್ರ ಬರೆದಿದ್ದಕ್ಕೆ ಪ್ರೇಮಿಯಿಂದಲೇ ಸ್ನೇಹಿತನ ಕೊಲೆ!

Published

on

ಬೆಂಗಳೂರು: ತನ್ನ ಗೆಳತಿಗೆ ಪತ್ರ ಬರೆದಿದ್ದಕ್ಕೆ ರೊಚ್ಚಿಗೆದ್ದ ಸ್ನೇಹಿತನನ್ನೇ ಪ್ರೇಮಿಯೊಬ್ಬ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಕನ್ನಮಂಗಲದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತಿರುಮನಹಳ್ಳಿ ಗ್ರಾಮದ ನಿವಾಸಿ ರಾಮಮೂರ್ತಿ (28) ಕೊಲೆಯಾದ ದುರ್ದೈವಿ. ಆರೋಪಿಗಳಾದ ದೇವರಾಜ್ ಹಾಗೂ ಸುನೀಲ್ ನನ್ನು ಕಾಡುಗೋಡಿ ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ಏನಿದು ಘಟನೆ?
ರಾಮಮೂರ್ತಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದು, ತಾಯಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಾವತಿ ಪುತ್ರ, ಆರೋಪಿ ದೇವರಾಜ್ ಕಂಟ್ರಾಕ್ಟರ್ ಆಗಿದ್ದ. ಇಬ್ಬರು ಸೇರಿ ಕಳೆದ ಎರಡು ತಿಂಗಳಿಂದ ಬೆಂಗಳೂರು ಹೊರವಲಯದ ಕನ್ನಮಂಗಲ ಗ್ರಾಮದಲ್ಲಿ ವಾಸವಾಗಿದ್ದರು.

ದೇವರಾಜ್ ಪ್ರೀತಿಸುತ್ತಿದ್ದ ಯುವತಿಗೆ ರಾಮಮೂರ್ತಿ ಪತ್ರ ಬರೆದಿದ್ದ. ಈ ವಿಚಾರವಾಗಿ ಗುರುವಾರ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ದೇವರಾಜ್ ತನ್ನ ತಮ್ಮ ಸುನೀಲ್ ಜೊತೆಗೂಡಿ ರಾಮಮೂರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ರಾಮಮೂರ್ತಿ ಅಸ್ವಸ್ಥನಾಗಿ ಬಿದ್ದಿದ್ದರಿಂದ ಗಾಬರಿಗೊಂಡ ದೇವರಾಜ್ ಮನೆಯಿಂದ ಹೊರಬಂದಿದ್ದಾನೆ. ದುಷ್ಕರ್ಮಿಗಳು ಗೆಳೆಯನ ಮೇಲೆ ಹಲ್ಲೆ ಮಾಡಿಹೋಗಿದ್ದಾರೆ ಆತನನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ದೇವರಾಜ್ ಸ್ಥಳೀಯರಿಗೆ ಸುಳ್ಳು ಹೇಳಿ ರಾಮಮೂರ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಮಮೂರ್ತಿ ಮೃತಪಟ್ಟಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು, ಆರೋಪಿಗಳಾದ ದೇವರಾಜ್ ಹಾಗೂ ಸುನೀಲ್‍ನನ್ನು ಬಂಧಿಸಿದ್ದಾರೆ. ಇಬ್ಬರನ್ನು ತೀವ್ರ ವಿಚಾರಣೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv