Bengaluru City
ಕೋವಿಡ್ 19 ಹೊಸ ಮಾರ್ಗಸೂಚಿ – ಹೆಚ್ಚು ಜನ ಸೇರುವ ಸಮಾರಂಭಕ್ಕೆ ನಿರ್ಬಂಧ ಹೇರಲು ಪರೋಕ್ಷ ಸೂಚನೆ

– ಕೇಂದ್ರ ಗೃಹ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
– ಚಳಿಗಾಲದಲ್ಲಿ ಕೊರೊನಾ ಎರಡನೇ ಅಲೆಗೆ ಕ್ರಮ
– ರಾತ್ರಿ ಕರ್ಫ್ಯೂಗೆ ಅನುಮತಿ, ಲಾಕ್ಡೌನ್ ಇಲ್ಲ
ನವದೆಹಲಿ: ಚಳಿಗಾಲದಲ್ಲಿ ಕೋವಿಡ್ 19 ಎರಡನೇ ಅಲೆಯ ಆರಂಭ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನಿಯಮಗಳನ್ನು ಬಿಗಿಗೊಳಿಸಿ ಮಾರ್ಗಸೂಚಿ ಹೊರಡಿಸಿದೆ.
ಹೊಸ ಮಾರ್ಗಸೂಚಿಗಳು ಡಿಸೆಂಬರ್ 1 ರಿಂದ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಈ ಮಾರ್ಗಸೂಚಿ ನಿಯಮಗಳನ್ನು ಜಾರಿಗಳಿಸುವ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.
ಪರೋಕ್ಷವಾಗಿ ನೈಟ್ ಕರ್ಫ್ಯೂ ಹೇರುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಿದೆ. ಅಷ್ಟೇ ಅಲ್ಲದೇ ಸಮಾರಂಭಗಳಿಗೆ ಜನರನ್ನು ನಿಯಂತ್ರಿಸುವ ಬಗ್ಗೆಯೂ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ?
– ಕಂಟೈನ್ಮೆಂಟ್ ವಲಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾಡಳಿತ ಕಂಟೈನ್ಮೆಂಟ್ ವಲಯಗಳ ಹೆಸರನ್ನು ವೆಬ್ಸೈಟ್ಗಳಲ್ಲಿ ಪ್ರಕಟಿಸಬೇಕು.
– ಕಂಟೈನ್ಮೆಂಟ್ ವಲಯದಲ್ಲಿ ಅಗತ್ಯ ವಸ್ತುಗಳನ್ನು ತರಲು ಮಾತ್ರ ಅನುಮತಿ ನೀಡಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಿಸಬೇಕು.
– ಸಿನಿಮಾ ಮಂದಿರಗಳು ಶೇ.50ರಷ್ಟು ಆಸನಗಳೊಂದಿಗೆ ಮಾತ್ರ ತೆರೆಯಬೇಕು.
-ಸಾಮಾಜಿಕ/ ಧಾರ್ಮಿಕ/ ಕ್ರೀಡೆ/ ಮನರಂಜನೆ/ ಶಿಕ್ಷಣ/ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಹಾಲಿನ ಸಾಮರ್ಥ್ಯದಲ್ಲಿ ಶೇ.50ರಷ್ಟು ಜನ ಭಾಗವಹಿಸಬಹುದು. ಮುಚ್ಚಿರುವ ಹಾಲಿನಲ್ಲಿ ಗರಿಷ್ಟ 200 ಜನ ಭಾಗವಹಿಸಬಹುದು. ಹೀಗಿದ್ದರೂ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಗರಿಷ್ಟ 100 ಮಂದಿಗೆ ಅವಕಾಶ ನೀಡಬಹುದು.
– ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳು ಕಂಟೈನ್ಮೆಂಟ್ ಪ್ರದೇಶ ಹೊರತು ಪಡಿಸಿ ಬೇರೆ ಕಡೆ ಲಾಕ್ಡೌನ್ ಹೇರುವಂತಿಲ್ಲ. ರಾತ್ರಿ ಕರ್ಫ್ಯೂ ಹೇರಲು ಅನುಮತಿ.
– ರಾಜ್ಯದ ಒಳಗಡೆ ಮತ್ತು ರಾಜ್ಯ, ರಾಜ್ಯಗಳ ನಡುವಿನ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ.
– 65 ವರ್ಷ ಮೇಲ್ಪಟ್ಟವರು, ಅನಾರೋಗ್ಯ ಹೊಂದಿದವರು, 10 ವರ್ಷದ ಒಳಗಿನನವರು ಮನೆಯಲ್ಲಿರಬೇಕೆಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.
