Connect with us

Corona

ಕೊರೊನಾ 2ನೇ ಅಲೆ- ಫ್ರಾನ್ಸ್, ಜರ್ಮನಿಯಲ್ಲಿ ಮತ್ತೆ ಲಾಕ್‍ಡೌನ್

Published

on

ಬರ್ಲಿನ್/ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕೆಲ್ ದೇಶದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವಂತೆ ಬುಧವಾರ ಆದೇಶ ಹೊರಡಿಸಿದ್ದಾರೆ. ಚಳಿಗಾಲದಲ್ಲಿ ಕೊರೊನಾ ವೈರಸ್ ಇನ್‍ಫೆಕ್ಷನ್ ಅಥವಾ ಸೋಂಕು ಹರಡುವಿಕೆ ವೇಗ ಪಡೆದುಕೊಳ್ಳುವ ಆತಂಕದಿಂದ ಸರ್ಕಾರಗಳು ಈ ನಿರ್ಧಾರ ಪ್ರಕಟಿಸಿವೆ. ಫ್ರಾನ್ಸ್ ಇಡೀ ದೇಶವೇ ಲಾಕ್ ಆಗಲಿದೆ. ಇತ್ತ ಜರ್ಮನಿ ನಾಲ್ಕು ವಾರದ ಅವಧಿಗೆ ಲಾಕ್‍ಡೌನ್ ಅಂತ ಆದೇಶಿಸಿದೆ.

ಕಳೆದ ಒಂದು ವಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಡೀರ್ ಅಂತ ಹೆಚ್ಚಳವಾಗುತ್ತಿರುವ ಹಿನ್ನೆಲೆ ಪ್ರಾನ್ಸ್ ಮತ್ತು ಜರ್ಮನಿ ಮತ್ತೆ ಲಾಕ್‍ಡೌನ್ ತಂತ್ರವನ್ನ ಪ್ರಯೋಗಿಸಿವೆ. ಕಳೆದ ವಾರ ಇಡೀ ವಿಶ್ವದಲ್ಲಿ 20.8 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಯುರೋಪಿನ ರಷ್ಯಾ, ಟರ್ಕಿ, ಇಜರಾಲ್ ಮತ್ತು ಮಧ್ಯ ಏಷ್ಯಾಗಳಲ್ಲಿಯೇ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಯುರೋಪ್ ರಾಷ್ಟ್ರಗಳಲ್ಲಿ ಕಳೆದ ವಾರ ಸೋಂಕಿತರ ಸಂಖ್ಯೆ ಶೇ.35ರಷ್ಟು ಏರಿಕೆಯಾಗಿದೆ. ಯುರೋಪಿ ಒಕ್ಕೂಟದ ರಾಷ್ಟ್ರಗಳು, ಬ್ರಿಟನ್, ನಾರ್ವೆ, ಸ್ವಿಟ್ಜರ್‍ಲ್ಯಾಂಡ್ ದೇಶಗಳಲ್ಲಿ ಏಳು ದಿನಗಳೊಳಗೆ ಅಂದಾಜು 10 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಮುಂದಿನ ಎರಡ್ಮೂರು ವಾರಗಳಲ್ಲಿ ಈ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಗಳು ದಟ್ಟವಾಗಿವೆ.

ಲಾಕ್‍ಡೌನ್ ಘೋಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಏಂಜೆಲಾ ಮೆರ್ಕೆಲ್, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ತಡೆಗಾಗಿ ಲಾಕ್‍ಡೌನ್ ಮಾಡಲಾಗಿದೆ. ಬಾರ್, ಸಿನಿಮಾ ಥಿಯೇಟರ್, ರೆಸ್ಟೋರೆಂಟ್ ಸೇರಿದಂತೆ ಅತಿಹೆಚ್ಚು ಜನ ಸೇರುವ ಪ್ರದೇಶಗಳು ಮುಂದಿನ ನಾಲ್ಕು ವಾರ ಬಂದ್ ಆಗಲಿವೆ ಎಂದು ತಿಳಿಸಿದ್ದಾರೆ. ಆದೇಶಕ್ಕೂ ಮುನ್ನ ಮೆರ್ಕೆಲ್ 16 ರಾಜ್ಯಗಳ ಗವರ್ನರ್ ಗಳ ಜೊತೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸುದೀರ್ಘ ಸಭೆ ನಡೆಸಿದ್ದರು. ಎಲ್ಲ ಗವರ್ನರ್, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಆರ್ಥಿಕ- ವೈದ್ಯಕೀಯ ತಜ್ಞರ ಜೊತೆ ಚರ್ಚಿಸಿ ಲಾಕ್‍ಡೌನ್ ವಿಧಿಸುವ ಬಗ್ಗೆ ನಿರ್ಧರಿಸಿದ್ದಾರೆ. ನವೆಂಬರ್ ಅಂತ್ಯದವರೆಗೂ ಜರ್ಮನಿ ಲಾಕ್ ಆಗಲಿದೆ.

Click to comment

Leave a Reply

Your email address will not be published. Required fields are marked *