Saturday, 25th May 2019

Recent News

ಜೆಡಿಎಸ್ ಮುಖಂಡನ ಹತ್ಯೆ ಪ್ರಕರಣ- ನಾಲ್ವರು ಆರೋಪಿಗಳ ಬಂಧನ

ಮಂಡ್ಯ: ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಮದ್ದೂರಿನ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯೋಗೇಶ್, ಸ್ವಾಮಿ, ಶಿವರಾಜ್ ಹಾಗೂ ಹೇಮಂತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಪ್ರಕರಣ ಸಂಬಂಧ ಇಂದು ಬೆಳಗ್ಗೆ ಒಟ್ಟು 8 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಅಲ್ಲದೇ ಮೃತ ಪ್ರಕಾಶ್ ಕಾರಿನಲ್ಲಿದ್ದ ತೊಪ್ಪನಹಳ್ಳಿಯ ಅಭಿಲಾಷ್ ನೀಡಿದ ದೂರಿನನ್ವಯ ಎಫ್‍ಐಆರ್ ದಾಖಲಾಗಿಸಿತ್ತು.

ಪ್ರಕರಣದ ಬೆನ್ನತ್ತಿದ್ದ ಪೊಲೀಸರು ತೊಪ್ಪನಹಳ್ಳಿ ಹಾಗೂ ಮದ್ದೂರಿನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 143(ಅಕ್ರಮ ಕೂಟ), 146(ದೊಂಬಿ), 148(ಮಾರಕಾಸ್ತ್ರಗಳಿಂದ ಹಲ್ಲೆ), 341(ಅಕ್ರಮವಾಗಿ ಬಂಧಿಸುವುದು), 307(ಕೊಲೆ ಯತ್ನ), 302 (ಕೊಲೆಗೆ ದಂಡನೆ), 120ಬಿ(ಕ್ರಿಮಿನಲ್ ಪಿತೂರಿ) ಹಾಗೂ 114(ಅಪರಾಧ ನಡೆದಾಗ ದುಷ್ಪ್ರೇರಕನ ಹಾಜರಿ) ಅಡಿಯಲ್ಲಿ ಪ್ರಕರಣ ದಾಖಲಾಗಿವೆ.

ಏನಿದು ಘಟನೆ?
ಸೋಮವಾರ ಸಂಜೆ 4.30ರ ವೇಳೆ ಮದ್ದೂರಿನ ಟಿಬಿ ಸರ್ಕಲ್ ಬಳಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು, ಕಾರಿನಲ್ಲಿ ಕುಳಿತಿದ್ದ ಪ್ರಕಾಶ್‍ರನ್ನು ಕತ್ತು ಸೀಳಿ ಪರಾರಿಯಾಗಿದ್ದರು. ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರಕಾಶ್ ಮೂಲತಃ ಕೊಪ್ಪನಹಳ್ಳಿ ಗ್ರಾಮದವರಾಗಿದ್ದು, ಮಾಜಿ ಪಂಚಾಯತ್ ಅಧ್ಯಕ್ಷೆಯ ಪತಿ ಹಾಗೂ ಜೆಡಿಎಸ್ ಮುಖಂಡರಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *