Connect with us

Dakshina Kannada

ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರವೇ ಶಿಲಾನ್ಯಾಸ – ರಹೀಂ ಉಚ್ಚಿಲ್

Published

on

ಮಂಗಳೂರು: ನೂತನ ಬ್ಯಾರಿ ಭವನಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ಸ್ಟಾಂಡ್ ಬಳಿ ಅಂದಾಜು 3 ಕೋಟಿ ಮೌಲ್ಯದ 0.25 ಎಕ್ರೆ ಜಮೀನು ಸರಕಾರದಿಂದ ಅಧಿಕೃತವಾಗಿ ಬ್ಯಾರಿ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದು ಜನಪ್ರತಿನಿಧಿಗಳು ಹಾಗೂ ಬ್ಯಾರಿ ಭಾಷಿಕ ಸಮುದಾಯದ ಪ್ರಮುಖರನ್ನು ಕರೆದು ಶೀಘ್ರದಲ್ಲಿಯೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಬ್ಯಾರಿ ಭವನಕ್ಕೆ ನೀರುಮಾರ್ಗದ ಬೈತುರ್ಲಿ ಗ್ರಾಮದಲ್ಲಿ 0.25 ಎಕರೆ ಜಾಗವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಖರೀದಿ ಮಾಡಲಾಗಿದ್ದು, ಇಲ್ಲಿ ಬ್ಯಾರಿ ಭವನಕ್ಕೆ ನೀಲನಕ್ಷೆ ತಯಾರಾಗಿತ್ತು. ಈ ನಿವೇಶನದ ಆಸುಪಾಸಿನಲ್ಲಿ ಬ್ಯಾರಿ ಭಾಷಿಕರ ಜನಸಂಖ್ಯೆ ತೀರಾ ವಿರಳವಾಗಿದ್ದು, ಭವನ ನಿರ್ಮಾಣಕ್ಕೆ ಉಪಯುಕ್ತವಾದ ನಿವೇಶನ ಅಲ್ಲ ಎಂದು ಮನಗಂಡ ಪ್ರಸಕ್ತ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಕ್ಷಣ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಗಾಗಲೇ ತುಳು, ಕೊಂಕಣಿ ಸೇರಿದಂತೆ ಇತರ ಅಕಾಡೆಮಿಗಳಿಗೆ ಸರಕಾರದಿಂದ ಉಚಿತವಾಗಿ ಜಮೀನು ನೀಡಿದಂತೆ ಬ್ಯಾರಿ ಅಕಾಡೆಮಿಗೂ ನೀಡಬೇಕೆಂದು ಮನವಿ ಮಾಡಿದ್ದರು.

ಅದರಂತೆ ಇದೀಗ ಅತೀ ಹೆಚ್ಚು ಬ್ಯಾರಿ ಭಾಷಿಕರನ್ನು ಒಳಗೊಂಡ ತೊಕ್ಕೊಟ್ಟು ಪರಿಸರದಲ್ಲಿಯೇ ನಿವೇಶವನವನ್ನು ಉಚಿತವಾಗಿ ಒದಗಿಸುವ ಮೂಲಕ ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂಬ ನೀತಿಯಂತೆ ನಡೆದುಕೊಂಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳು ಸೇರಿದಂತೆ ಕರ್ನಾಟಕ ಸರಕಾರಕ್ಕೆ ರಹೀಂ ಉಚ್ಚಿಲ್ ಅಭಿನಂದನೆ ಹಾಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಈಗಾಗಲೇ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ನಿವೇಶನವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗುವುದು ಹಾಗೂ ಅಕಾಡೆಮಿಯಿಂದ ಮೂಡಾಕ್ಕೆ ಪಾವತಿಯಾದ ಮೊತ್ತವನ್ನು ಮೂಡಾದಿಂದ ಮರಳಿ ಪಡೆದು ಅಕಾಡೆಮಿಯ ವಿವಿಧ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಈಗಾಗಲೇ ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ. ರವಿಯವರ ಸಹಕಾರದ ಪರಿಣಾಮ ಮುಖ್ಯಮಂತ್ರಿಗಳು ಬ್ಯಾರಿ ಭವನಕ್ಕೆ ಈಗಾಗಲೇ 6 ಕೋಟಿಯನ್ನು ಮಂಜೂರು ಮಾಡಿ 3 ಕೋಟಿ ರೂ ಬಿಡುಗಡೆ ಮಾಡಿದ್ದಾರೆ.  ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ಸುಮಾರು 6 ರಿಂದ 12 ತಿಂಗಳ ಒಳಗಾಗಿ ಬ್ಯಾರಿ ಭವನ ಅಕಾಡೆಮಿ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ಈ ಬ್ಯಾರಿ ಭವನ ವಿಶಾಲವಾದ ಸಭಾಂಗಣ, ಮಿನಿಹಾಲ್, ಅಕಾಡೆಮಿಯ ಕಛೇರಿ, ಸಾರ್ವಜನಿಕ ಗ್ರಂಥಾಲಯ, ವಸ್ತು ಸಂಗ್ರಹಾಲಯವನ್ನು ಹೊಂದಿರುತ್ತದೆ. ಈ ಭವನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಬರುವುದರಿಂದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

Click to comment

Leave a Reply

Your email address will not be published. Required fields are marked *

www.publictv.in