Connect with us

Bengaluru City

ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಎಚ್‍ಡಿಡಿ ನಿರ್ಧಾರ

Published

on

ಬೆಂಗಳೂರು: ಜಗತ್ತಿನಾದ್ಯಂತ ಹೆಮ್ಮಾರಿ ಕೊರೊನಾ ವೈರಸ್ ತಾಂಡವಾಡುತ್ತಿರುವ ಹಿನ್ನೆಲೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.

ಎಚ್.ಡಿ.ದೇವೇಗೌಡ ಅವರು ಮೇ 18ರಂದು 88ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ ಪ್ರತಿ ವರ್ಷದಂತೆ ಈ ವರ್ಷ ಆಚರಿಸಿಕೊಳ್ಳದೇ ಇರುಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ಮನೆಯ ಬಳಿ ಬಾರದಂತೆ ಅಭಿಮಾನಿಗಳು, ನಾಯಕರು, ಕಾರ್ಯಕರ್ತರಿಗೆ ಸಂದೇಶ ರವಾನೆ ಮಾಡಿದ್ದಾರೆ.

ದೇಶದಲ್ಲಿ ಲಾಕ್‍ಡೌನ್ ನಿಯಮಗಳು ನಡೆಯುತ್ತಿವೆ. ನಿಯಮಗಳನ್ನು ಮೀರುವುದನ್ನ ನಾನು ಒಪ್ಪುವುದಿಲ್ಲ. ಒಂದು ವಾರದಿಂದ ಕೊರೊನಾ ಸೋಂಕು ಹೆಚ್ಚಾಗಿರುವುದು ನನ್ನನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ನೀವು ಇದ್ದ ಕಡೆಯಿಂದಲೇ ನನಗೆ ಶುಭಾಶಯ ತಿಳಿಸಿ. ಯಾರು ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾಮಾರಿ ಕೊರೊನಾದಿಂದ ರಾಜ್ಯ ತತ್ತರಿಸಿದೆ. ಬಡವರು, ಕಾರ್ಮಿಕರು ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇಂತಹ ವಿಷಮ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸೋದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.

ಮೇ 18ರಂದು ಹೂಗುಚ್ಚಗಳೊಂದಿಗೆ ಬಂದು ಶುಭ ಹಾರೈಸುವ ಬದಲು ಕೊರೊನಾ ಸಂಕಷ್ಟ ಪೀಡಿತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತರಾಗಿರೋಣ ಎಂದು ಹೇಳಿದ್ದಾರೆ.