Connect with us

Cricket

ಕಾಶ್ಮೀರ ಎಂದಿಗೂ ನಮ್ಮದೇ ಎಂದ ಅಫ್ರಿದಿಗೆ ಪಾಕ್ ಮಾಜಿ ಕ್ರಿಕೆಟಿಗನಿಂದಲೇ ಛೀಮಾರಿ

Published

on

ಇಸ್ಲಾಮಾಬಾದ್: ಕಾಶ್ಮೀರ ಎಂದಿಗೂ ನಮ್ಮದೇ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ತಂಡದ ಆಲ್‍ರೌಂಡರ್ ಶಾಹಿದ್ ಅಫ್ರಿದಿಗೆ ಸಹ ಆಟಗಾರರಾಗಿದ್ದ ದಾನಿಶ್ ಕನೇರಿಯಾ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಶ್ರಮಿಸುತ್ತಿದ್ದ ಶಾಹಿದ್ ಅಫ್ರಿದಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಸಹಾಯ ಮಾಡಿದ್ದರು. ಆದರೆ ಅದಾದ ಕೆಲ ದಿನಗಳಲ್ಲಿ ಅಫ್ರಿದಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತನಾಡಿ ಯುವಿ ಹಾಗೂ ಭಜ್ಜಿ ಸ್ನೇಹದಿಂದ ದೂರವಾಗಿದ್ದಾರೆ. ಇದೇ ವಿಚಾರವಾಗಿ ಈಗ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕನೇರಿಯಾ, “ಶಾಹಿದ್ ಅಫ್ರಿದಿ ಯಾವುದೇ ವಿಷಯದ ಬಗ್ಗೆ ಮಾತನಾಡುವ ಮೊದಲು ಯೋಚಿಸಬೇಕು. ಅವರು ರಾಜಕೀಯಕ್ಕೆ ಸೇರಲು ಬಯಸಿದರೆ ಕ್ರಿಕೆಟ್‍ನೊಂದಿಗಿನ ಎಲ್ಲಾ ಸಂಬಂಧಗಳನ್ನು ತ್ಯಜಿಸಬೇಕು. ರಾಜಕಾರಣಿಗಳಂತೆ ಮಾತನಾಡುತ್ತಿದ್ದರೆ ಕ್ರಿಕೆಟ್‍ನಿಂದ ದೂರವಿರುವುದು ಮುಖ್ಯ. ಈ ರೀತಿಯ ಮಾತುಗಳು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಕೆಟ್ಟ ಭಾವನೆ ಮೂಡಿಸುತ್ತೆ” ಎಂದು ಗುಡುಗಿದ್ದಾರೆ. ಇದನ್ನೂ ಓದಿ: ‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮುನ್ನ ಅಫ್ರಿದಿ ಯಾವ ಮುಖ ಇಟ್ಟುಕೊಂಡು ಯುವಿ ಮತ್ತು ಭಜ್ಜಿ ಅವರ ಬಳಿ ಸಹಾಯ ಕೇಳಿದರು? ಸಹಾಯ ಪಡೆದುಕೊಂಡು ಅವರ ದೇಶ ಮತ್ತು ಪ್ರಧಾನಿಯ ಬಗ್ಗೆ ದ್ವೇಷದ ಹೇಳಿಕೆ ನೀಡಿದ್ದಾರೆ. ಇದು ಯಾವ ರೀತಿಯ ಸ್ನೇಹ ಎಂದು ಕನೇರಿಯಾ ಪ್ರಶ್ನಿಸಿ ಕನೇರಿಯಾ ಅಫ್ರಿದಿಗೆ ಛೀಮಾರಿ ಹಾಕಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಕನೇರಿಯಾ ಸುದ್ದಿಯಲ್ಲಿದ್ದು, ಹಿಂದೂ ಎಂಬ ಕಾರಣಕ್ಕಾಗಿ ಪಾಕಿಸ್ತಾನ ರಾಷ್ಟ್ರೀಯ ತಂಡದಲ್ಲಿ ಅವರು ಎದುರಿಸಿದ ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ. ಅದರಲ್ಲೂ ಅಫ್ರಿದಿಯ ನಡೆದುಕೊಂಡ ರೀತಿಯನ್ನು ವಿವರಿಸಿದ್ದರು. ಇದನ್ನೂ ಓದಿ: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

ಪಿಒಕೆ ಬಗ್ಗೆ ಅಫ್ರಿದಿ ಮಾತನಾಡಿದ ನಂತರ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಗೌತಮ್ ಗಂಭೀರ್ ಸೇರಿದಂತೆ ಅನೇಕ ಟೀಂ ಇಂಡಿಯಾ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ವಾಗ್ದಾಳಿ ನಡೆಸಿದರು. ತೀವ್ರ ಹಿನ್ನಡೆ ಅನುಭವಿಸಿದ ಅಫ್ರಿದಿ ಕೆಲವು ಭಾರತೀಯ ಕ್ರಿಕೆಟಿಗರೊಂದಿಗೆ ಎಲ್ಲ ಸ್ನೇಹವನ್ನು ಕಳೆದುಕೊಂಡರು.