Connect with us

Bellary

ಕಣ್ಣಂಚಿನಿಂದ ನೀರು ತನ್ನಷ್ಟಕ್ಕೆ ತಾನೇ ಹರಿಯುತ್ತಿದೆ- ರಾಮುಲುರ ತಾಯಿ ನಿಧನಕ್ಕೆ ಜನಾರ್ದನ ರೆಡ್ಡಿ ಸಂತಾಪ

Published

on

– ಈ ಸಂದರ್ಭದಲ್ಲಿಯೂ ಕಾನೂನು ನನ್ನನ್ನು ಕಟ್ಟಿಹಾಕಿದೆ

ಬೆಂಗಳೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ತಾಯಿಯ ನಿಧನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಂತಾಪ ಸೂಚಿಸಿದ್ದಾರೆ.

ಕೊರೊನಾದಿಂದ ಮುಕ್ತಿಯನ್ನು ಪಡೆದು ಜಯಿಸಿದರು ಆದರೆ ಮೃತ್ಯುಂಜಯನನ್ನು ಜಯಿಸಲಿಲ್ಲ ನನ್ನ ತಾಯಿ ಎಂದು ಹೇಳುವ ಮೂಲಕ ದುಃಖ ತೋಡಿಕೊಂಡಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ಸುದೀರ್ಘವಾಗಿ ಬರೆದು ಆಗಲಿದ ತಾಯಿಯ ಕುರಿತ ತಮ್ಮ ಭಾವನೆಗಳನ್ನು ಹಂಚಿಕೊಂಡು ಮಾಜಿ ಸಚಿವ ಜನಾರ್ದನ ರೆಡ್ಡಿ ವಿಷಾಧ ವ್ಯಕ್ತಪಡಿಸಿದ್ದಾರೆ.

ಪೋಸ್ಟ್‌ನಲ್ಲೇನಿದೆ ?

ನನ್ನ ಜೀವದ ಗೆಳೆಯ ಸಚಿವ ಬಿ. ಶ್ರೀರಾಮುಲು ತಾಯಿ ಬಿ.ಹೊನ್ನೂರಮ್ಮ ವಿಧಿವಶ.. ಕೊರೊನಾದಿಂದ ಮುಕ್ತಿಯನ್ನು ಪಡೆದು ಜಯಿಸಿದರು ಆದರೆ ಮೃತ್ಯುಂಜಯನನ್ನು ಜಯಿಸಲಿಲ್ಲ ನನ್ನ ತಾಯಿ. ನನ್ನ ಪ್ರಾಣ ಸ್ನೇಹಿತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿ ಬಿ. ಹೊನ್ನೂರಮ್ಮ(90) ಅವರು ನಿನ್ನೆ ರಾತ್ರಿ 11:30ಕ್ಕೆ ವಿಧಿವಶರಾದರು ಎಂದು ತಿಳಿಸಲು ವಿಷಾಧಿಸುತ್ತೇನೆ. ತಾಯಿ ಹೊನ್ನೂರಮ್ಮ ಅವರು ಶ್ರೀರಾಮುಲು ಹಾಗೂ ನನ್ನನ್ನು ಇಬ್ಬರನ್ನು ತನ್ನ ಮಕ್ಕಳ ಹಾಗೆ ನೋಡಿಕೊಂಡಿದ್ದರು. ನಾವು ಇಬ್ಬರು ಬಾಲ್ಯ ಸ್ನೇಹಿತರಾದ ಕಾರಣ ನಾನು ಕಂಡಂತೆ ನನಗೆ ಅವರು ಶ್ರೀರಾಮುಲುಗಿಂತಲೂ ಹೆಚ್ಚಿನ ಪ್ರೀತಿಯನ್ನು ಕೊಟ್ಟು ಬೆಳೆಸಿದ್ದರು. ಆದರೆ ನಮ್ಮನ್ನು ಬೆಳೆಸಿದ ತಾಯಿ ಇಂದು ಇಹಲೋಕ ತ್ಯಜಿಸಿದರು ಎಂಬ ಸುದ್ದಿಯನ್ನು ಕೇಳಿ, ಮಾತು ಬಾರದಾಗಿ, ದು:ಖ ತಡೆಯಲಾಗುತ್ತಿಲ್ಲ ಕಣ್ಣಂಚಿನಿಂದ ನೀರು ತನ್ನಷ್ಟಕ್ಕೆ ತಾನೇ ಹರಿಯುತ್ತಿದೆ. ಈ ವಿಷಯ ಕೇಳಿ ಇಡಿ ನಮ್ಮ ಕುಟುಂಬದಲ್ಲಿ ದು:ಖ ಆವರಿಸಿದೆ.

ನಾವು ಬಾಲ್ಯದಿಂದ ಬಡತನದಲ್ಲಿ ಬೆಳೆದು ಬಂದವರು. ನಂತರ ನಮಗೆ ಶ್ರೀಮಂತಿಕೆ, ಅಧಿಕಾರ ಬಂದಿರಬಹುದು ಆದರೆ ನಮ್ಮ ತಾಯಿ ಅವರು ಯಾವತ್ತು ಅದನ್ನು ಅನುಭವಿಸಿದವರಲ್ಲ. ತಮ್ಮೂರು ಜೋಳದರಾಸಿಗೆ ಹೋಗಬೇಕಾದರೆ ಕಾರಿನಲ್ಲಿ ಹೋಗುತ್ತಿರಲಿಲ್ಲ. ನಾನು ಶ್ರೀರಾಮುಲು ಕೂಡಿಕೊಂಡು ಮನೆಯ ವರೆಗೆ ಕಾರು ತೆಗೆದುಕೊಂಡು ಹೋದರು ಅವರು ಕಾರಿನಲ್ಲಿ ಬರುತ್ತಿರಲಿಲ್ಲ. ಬಳ್ಳಾರಿಯಿಂದ ಬಸ್ಸಿನಲ್ಲಿಯೇ ಸಾಮಾನ್ಯರ ಹಾಗೆ ಪ್ರಯಾಣಿಸುತ್ತಿದ್ದರು. ಅಲ್ಲದೆ ಕೊನೆಯವರೆಗೂ ಜನ ಸಾಮಾನ್ಯರಲ್ಲಿ ತಾವು ಒಬ್ಬರು ಎಂಬಂತೆ ಸರಳವಾದ ಜೀವನವನ್ನು ನಡೆಸಿದ್ದರು.

ಶ್ರೀರಾಮುಲು ಅವರು ತಾಯಿಯ ಬಗ್ಗೆ ಅಪಾರವಾದ ಪ್ರೀತಿ ಗೌರವವನ್ನು ಹೊಂದಿದ್ದರು. ಶ್ರೀರಾಮುಲು ಅವರು ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಸಂದರ್ಭದಲ್ಲಿ, ಅಧಿಕಾರ ವಹಿಸಿಕೊಳ್ಳುವಾಗ ತಾಯಿ ಹೊನ್ನೂರಮ್ಮ ಅವರನ್ನು ಬೆಂಗಳೂರಿನಲ್ಲಿರುವ ವಿಧಾನಸೌಧಕ್ಕೆ ಕರೆದುಕೊಂಡು ಬಂದು ಸಚಿವರ ಕುರ್ಚಿಯಲ್ಲಿ ಕೂರಿಸಿ, ನಂತರ ಅಧಿಕಾರ ಸ್ವೀಕಾರ ಮಾಡಿದ್ದರು. ಅಲ್ಲದೆ ಬೆಂಗಳೂರು ಹಾಗೂ ವಿಧಾನಸೌಧವನ್ನು ಮೊದಲ ಬಾರಿಗೆ ನೋಡಿದ ತಾಯಿ, ಆಶ್ಚರ್ಯಗೊಂಡು ಬೆರಗಾಗಿ ನಿಂತಿದ್ದರು.

ಗೆಳೆಯ ಶ್ರೀರಾಮುಲು ಅವರು ತಾಯಿ ಹೊನ್ನೂರಮ್ಮ ಅವರಿಗೆ ಅತ್ಯಂತ ಪ್ರೀತಿಯ ಮಗನಾಗಿದ್ದರು, ಶ್ರೀರಾಮುಲು ಅವರಿಗೂ ತಾಯಿ ಬಗ್ಗೆ ಅಪಾರವಾದ ಪ್ರೀತಿ ಗೌರವ ಇತ್ತು. ಗೆಳೆಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ದೃಢವಾದ ಸಂದರ್ಭದಲ್ಲಿಯೇ ತಾಯಿ ಹೊನ್ನೂರಮ್ಮ ಅವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ ಸಚಿವ ಶ್ರೀರಾಮುಲು ಅವರು ಚಿಕಿತ್ಸೆ ಪಡೆದ ಬೆಂಗಳೂರಿನ ಸರಕಾರಿ ಆಸ್ಪತ್ರೆಗೆ ತಾಯಿಯನ್ನು ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು. ನಂತರ ಅವರು ಕೊರೊನಾದಿಂದ ಮುಕ್ತಿಯನ್ನು ಪಡೆದು ಜಯಿಸಿ ಬಂದಿದ್ದರು. ಆದರೆ ಅವರು ಮೃತ್ಯುವನ್ನು ಜಯಸಿ ಬರಲಿಲ್ಲವಲ್ಲ ಎಂಬ ನೋವು ನಮ್ಮೆನ್ನೆಲ್ಲಾ ಕಾಡುತ್ತಿದೆ.

ತಾಯಿಯ ಅಗಲಿಕೆಯಿಂದ ದು:ಖ ತಡೆಯಲಾಗುತ್ತಿಲ್ಲ. ಜೀವದ ಗೆಳೆಯ ಶ್ರೀರಾಮುಲುಗೆ ಹೇಗೆ ಸಂತೈಸಲಿ, ಈ ಸಂದರ್ಭದಲ್ಲಿಯೂ ಕಾನೂನು ನನ್ನನ್ನು ಕಟ್ಟಿಹಾಕಿದೆ. ಬಳ್ಳಾರಿಗೆ ಹೋಗದ ಅಸಹಾಯಕತೆ ನನ್ನದು. ತಾಯಿಯ ದರ್ಶನವನ್ನು ನಾನು ವಿಡಿಯೋ ಕರೆಯ ಮೂಲಕ ಪಡೆದುಕೊಳ್ಳುವ ಅನಿವಾರ್ಯತೆ ಬಂದಿದೆ. ಈ ನೋವು ನನ್ನನ್ನು ಮತ್ತಷ್ಟು ಕಾಡುತ್ತಿದೆ. ಕೊನೆಯದಾಗಿ ನನ್ನ ಗೆಳೆಯನಿಗೆ ಹಾಗೂ ಆತನ ಕುಟುಂಬದ ಸದಸ್ಯರಿಗೆ ತಾಯಿಯ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ, ನನ್ನ ತಾಯಿಯ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜನಾರ್ಧನ ರೆಡ್ಡಿ ಬರೆದುಕೊಂಡಿದ್ದಾರೆ.

ನನ್ನ ಜೀವದ ಗೆಳೆಯ ಸಚಿವ ಬಿ. ಶ್ರೀರಾಮುಲು ತಾಯಿ ಬಿ.ಹೊನ್ನೂರಮ್ಮ ವಿಧಿವಶ..ಕೋರೋನಾದಿಂದ ಮುಕ್ತಿಯನ್ನು ಪಡೆದು ಜಯಿಸಿದರು ಆದರೆ…

Gepostet von Gali Janardhan Reddy am Donnerstag, 20. August 2020

 

Click to comment

Leave a Reply

Your email address will not be published. Required fields are marked *