Sunday, 19th May 2019

ರಾಜೀನಾಮೆ ನಿರ್ಧಾರ ಮುಂದೂಡಿದ ಮಾಜಿ ಸಚಿವ ಎ ಮಂಜು..!

ಹಾಸನ: ಇಲ್ಲಿನ ಕಾಂಗ್ರೆಸ್ ಪಾಲಿಟಿಕ್ಸ್ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆಯುತ್ತಿದ್ದು, ಮಾಜಿ ಸಚಿವ ಎ ಮಂಜು ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಅವರು ದಿಢೀರ್ ಆಗಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

ಹೌದು. ಎ ಮಂಜು ಇಂದು ಕಾಂಗ್ರೆಸ್‍ಗೆ ರಾಜೀನಾಮೆ ನೀಡುವ ಕುರಿತು ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಇಂದು ರಾಜೀನಾಮೆ ನೀಡುತ್ತಿಲ್ಲ. ಬದಲಾಗಿ ಸೋಮವಾರ ಅಂತಿಮ ತೀರ್ಮಾನ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ.

ನಿರ್ಧಾರ ಬದಲಿಸಿದ್ದು ಯಾಕೆ..?
ಎ ಮಂಜು ಇಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಇದೇ ವೇಳೆ ರಾಜೀನಾಮೆಯ ಕುರಿತು ಮನವೊಲಿಸಲು ಮಾಜಿ ಸಿಎಂ ಮುಂದಾದ್ರು. ಈ ಹಿನ್ನೆಲೆಯಲ್ಲಿ ಎ ಮಂಜು ತಮ್ಮ ನಿರ್ಧಾರವನ್ನು ಮುಂದೂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಏನ್ ಹೇಳಿದ್ರು..?
“ಬಿಜೆಪಿ ಸೇರುವ ನಿರ್ಧಾರ ತಗೋಬೇಡ. ಅಲ್ಲಿ ಹೋದರೆ ನಿನ್ನ ರಾಜಕೀಯ ಭವಿಷ್ಯ ಹಾಳಾಗುತ್ತದೆ. ಬಿಜೆಪಿಗೆ ಹೋಗದೆ ಕಾಂಗ್ರೆಸ್ ನಲ್ಲೇ ಇರು. ಬಿಜೆಪಿಗೆ ಹೋದರೆ ಅಲ್ಲಿ ಕಡೆಗಣನೆಗೆ ಒಳಗಾಗ್ತೀಯ. ಆ ನಂತ್ರ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅನ್ನುವ ಸ್ಥಿತಿ ತಂದುಕೊಳ್ಳಬೇಡ ಎಂದು ಬುದ್ಧಿ ಮಾತು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸಿದ್ದರಾಮಯ್ಯ ಅವರ ಮಾತಿಗೆ ಎ. ಮಂಜು, ಹಾಸನದಲ್ಲಿ ನೀವ್ಯಾರೂ ಜೆಡಿಎಸ್ ನವರ ಕಾಟ ತಡೆಯಲಿಲ್ಲ. ಪ್ರಜ್ವಲ್ ನಂಥವರ ಪರ ಕಾಂಗ್ರೆಸ್ ನವರು ಹೇಗೆ ಮತ ಕೇಳೋದು?. ಮೊಮ್ಮಗನನ್ನು ನಿಲ್ಲಿಸುವ ದೇವೇಗೌಡರ ನಿರ್ಧಾರ ಸರಿಯಲ್ಲ. ನಾವು ಆಗಿನಿಂದಲೂ ಜೆಡಿಎಸ್ ವಿರುದ್ಧವೇ ಹೋರಾಡಿಕೊಂಡು ಬಂದಿದ್ದೇವೆ. ಈಗ ಪ್ರಜ್ವಲ್ ಪರ ಮತ ಕೇಳಲು ಹೋದರೆ ಜನ ಏನನ್ನಲ್ಲ?. ಜೆಡಿಎಸ್ ನವರಿಗೆ ಬುದ್ಧಿ ಕಲಿಸೋದಿಕ್ಕೆ ಇದೇ ಒಳ್ಳೆಯ ಅವಕಾಶ ಎಂದು ಮಂಜು, ಸಿದ್ದರಾಮಯ್ಯ ಬುದ್ಧಿ ಮಾತಿಗೊಪ್ಪದೆ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದರು ಎನ್ನಲಾಗಿತ್ತು.

ಶುಕ್ರವಾರ ಹಾಸನದ ಅರಸೀಕೆರೆ ಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಕಾಂಗ್ರೆಸ್ ತೊರೆಯುವ ಬಗ್ಗೆ ಎ.ಮಂಜು ಅವರು ಘೋಷಿಸಿದ್ದರು. ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ. ಹಾಗೆಯೇ ಕಾಂಗ್ರೆಸ್‍ನಿಂದ ಬಿಜೆಪಿಗೆ ಎ. ಮಂಜು ಜಿಗಿಯಲಿದ್ದಾರೆ. ಮಂಜು ಜೊತೆಗೆ ಕಾಂಗ್ರೆಸ್‍ನ ಬಹುತೇಕ ಜನಪ್ರತಿನಿಧಿಗಳು ಸಹ ಕಾಂಗ್ರೆಸ್ ಬಿಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *