Friday, 13th December 2019

Recent News

ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಅಲ್ಪೇಶ್ ಠಾಕೂರ್

ನವದೆಹಲಿ: ಗುಜರಾತ್ ಕಾಂಗ್ರೆಸ್ ಮಾಜಿ ಶಾಸಕ ಅಲ್ಪೇಶ್ ಠಾಕೂರ್ ಇದೀಗ ಬಿಜೆಪಿಗೆ ಜಂಪ್ ಆಗಿದ್ದಾರೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಸಿಡಿದೆದ್ದಿದ್ದ ಹಿಂದುಳಿದ ವರ್ಗದ ಪ್ರಭಾವಿ ನಾಯಕ ಅಲ್ಪೇಶ್ ಠಾಕೂರ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ಜುಲೈ 5 ರಂದು ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕಿದ್ದ ಅಲ್ಪೇಶ್ ಠಾಕೂರ್ ಬಳಿಕ ಕಾಂಗ್ರೆಸ್ ಶಾಸಕ ಸ್ಥಾನವನ್ನೂ ತ್ಯಜಿಸಿದ್ದರು. 2017ರಲ್ಲಿ ಕಾಂಗ್ರೆಸ್ ಸೇರಿದ್ದ ಅಲ್ಪೇಶ್, ರಾಧಾನ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಪ್ರಚಾರದ ವೇಳೆ ಮೋದಿ, ಅಮಿತ್ ಶಾ ವಿರುದ್ಧ ಖಂಡಾತುಂಡವಾಗಿ ಟೀಕಿಸಿದ್ದರು. ಆದರೆ ಆ ಬಳಿಕ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು.

ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಯುವ ತ್ರಿವಳಿ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಾಟೇಲ್, ಜಿಗ್ನೇಶ್ ಮೇವಾನಿ ಬಿಜೆಪಿಗೆ ತಲೆನೋವಾಗಿದ್ದರು. 2011 ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಸಂಘಟನೆ ನಿರ್ಮಿಸಿದ್ದ ಠಾಕೂರ್ ತಮ್ಮ ಜನಾಂಗದ ಪರ ಹೋರಾಟಕ್ಕೆ ಇಳಿದಿದ್ದರು. ಅಲ್ಲದೇ ಓಬಿಸಿ, ಎಸ್‍ಟಿ ಎಸ್‍ಸಿ ಏಕತಾ ವೇದಿಕೆ ನಿರ್ಮಿಸಿ ಶೋಷಿತ ಸಮುದಾಯಗಳ ಪರ ಆಂದೋಲಗಳನ್ನು ರೂಪಿಸಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ 2 ವರ್ಷಕ್ಕೆ ರಾಹುಲ್ ಗಾಂಧಿಗೆ ಕೈ ಕೊಟ್ಟಿದ ಅಲ್ಪೇಶ್ ಠಾಕೂರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಶಾಕ್ ನೀಡಿದ್ದರು. ಪರಿಣಾಮ ಬಿಜೆಪಿ ಗುಜರಾತ್ ನಲ್ಲಿ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವಿಪ್ ಮಾಡಲು ಸಹಕಾರಿ ಆಗಿತ್ತು. ಕಾಂಗ್ರೆಸ್ ಪಕ್ಷ ಠಾಕೂರ್ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಅಲ್ಪೇಶ್ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಸೇರ್ಪಡೆ ವಿಚಾರವನ್ನು ಸ್ಪಷ್ಟಪಡಿಸಿರಲಿಲ್ಲ. ಇಂದು ಗುಜರಾತ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸೇರ್ಪಡೆ ಆಗುವ ಮೂಲಕ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

Leave a Reply

Your email address will not be published. Required fields are marked *