Monday, 19th August 2019

Recent News

ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಕರ್ನಾಟಕವನ್ನು ಸಮರ್ಥಿಸಿಕೊಳ್ತಿದ್ರು: ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಅಗಲಿಕೆಯಿಂದ ರಾಷ್ಟ್ರ ರಾಜಕಾರಣಕ್ಕೆ ಬಹಳ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಅವರು ಅಕಾಲಿಕೆ ಮರಣಕ್ಕೆ ತುತ್ತಾಗಿದ್ದಾರೆ. ಅವರೊಬ್ಬರು ಸಜ್ಜನ ಮತ್ತು ಸುಸಂಸ್ಕೃತ ರಾಜಕಾರಣಿಯಾಗಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಂದು ರಾಷ್ಟ್ರ ಮಟ್ಟದ ರಾಜಕಾರಣದವರೆಗೂ ಹೋಗಿದ್ದರು ಎಂದು ಹೇಳಿದ್ದಾರೆ.

ಎಬಿವಿಪಿಯಿಂದ ಪ್ರಾರಂಭ ಮಾಡಿ, ಆರ್‍ಎಸ್‍ಎಸ್ ಜೊತೆ ಸಂಬಂಧ ಇಟ್ಟುಕೊಂಡು ಅಲ್ಲಿ ಬೆಳೆದು ರಾಷ್ಟ್ರ ರಾಜಕಾರಣಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಒಬ್ಬ ಉತ್ತಮ ಆಡಳಿತಗಾರ, ಕರ್ನಾಟಕದ ಬೆಳವಣಿಗೆಯ ಬಗ್ಗೆ ಅಪಾರವಾದ ಕಾಳಜಿ ಇಟ್ಟುಕೊಂಡಿದ್ದರು, ಕೇಂದ್ರ ಸರ್ಕಾರದಲ್ಲಿ ಇವರು ಯಾವಾಗ ಮಂತ್ರಿಯಾಗಿದ್ದರು ಆಗ ಕರ್ನಾಟಕದ ಯಾವುದೇ ಸಮಸ್ಯೆ ಬಂದರೂ ಕೂಡ ಕೇಂದ್ರ ಸರ್ಕಾರದಲ್ಲಿ ಕರ್ನಾಟಕವನ್ನು ಬಹಳ ಸಮರ್ಥಿಸುತ್ತಿದ್ದರು ಅಂತ ಸಿದ್ದರಾಮಯ್ಯ ಅವರು ಅನಂತಕುಮಾರ್ ಬಗ್ಗೆ ತಿಳಿಸಿದ್ದಾರೆ.

ಅನಂತಕುಮಾರ್ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಅವರು ನಮ್ಮನೆಲ್ಲಾ ಇವತ್ತು ಅಗಲಿದ್ದಾರೆ. ಇನ್ನು ಅವರಿಗೆ ಚಿಕ್ಕವಯಸ್ಸು, ಆದರೆ ಬಹಳ ದೀರ್ಘ ಕಾಲ ರಾಜಕಾರಣದಲ್ಲಿ ಇರಬೇಕಿತ್ತು. ಇವತ್ತು ಅವರ ಅಗಲಿಕೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಬಹಳ ನಷ್ಟವಾಗಿದೆ. ನಾವು ಅವರು ಬೇರೆ ಬೇರೆ ಪಕ್ಷವಾಗಿದ್ದರು ನಮ್ಮ ನಡುವೆ ಸ್ನೇಹ ಇತ್ತು. ಅವರು ಒಬ್ಬ ಒಳ್ಳೆಯ ಸ್ನೇಹ ಜೀವಿಯಾಗಿದ್ದಾರೆ. ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಅವರ ಸಾವಿನ ದುಃಖವನ್ನು ಭರಿಸುವಂತ ಶಕ್ತಿ ಕೊಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಕೊಡಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಇಂದು ಬೆಳಗ್ಗೆ ನಸುಕಿನ ಜಾವ ಅನಾರೋಗ್ಯದ ಹಿನ್ನೆಲೆಯಲ್ಲಿ ಅನಂತಕುಮಾರ್ ಅವರು ನಿಧನರಾಗಿದ್ದಾರೆ. ಮಂಗಳವಾರ ಅನಂತಕುಮಾರ್ ಅವರ ಅಂತ್ಯಕ್ತಿಯೆ ನಡೆಯಲಿದೆ. ನಾಳೆ ಬೆಳಗ್ಗೆ ಸುಮಾರು 10ಕ್ಕೆ ನ್ಯಾಷನಲ್ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಗರದ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅನಂತಕುಮಾರ್ ಅವರ ಅಂತ್ಯಕ್ರೀಯೆ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *