Connect with us

Bengaluru City

ಬಿಜೆಪಿಯವರು ಇಂಗು ತಿಂದ ಮಂಗನಂತಾಗಿದ್ದಾರೆ: ಸಿದ್ದರಾಮಯ್ಯ

Published

on

– ಕಾಂಗ್ರೆಸ್‍ನಲ್ಲಿ ಭಿನ್ನಮತವಿಲ್ಲ

ಬೆಂಗಳೂರು: ಬಿಜೆಪಿಯವರು ಕಳೆದ ಒಂದು ವರ್ಷದಿಂದ ಇಂಗು ತಿಂದ ಮಂಗನಂತಾಗಿದ್ದಾರೆ. ಇನ್ನುಮುಂದೆ ಪ್ರಯತ್ನ ಮಾಡಿದರೆ ಮೂರ್ಖರಾಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನವಿಲ್ಲ. ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಿನಿಂದ ಇದ್ದೇವೆ. ಮೈತ್ರಿ ಸರ್ಕಾರ ಕಲ್ಲು ಬಂಡೆಯಂತೆ ನಿಂತಿದೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

ಪಕ್ಷದ ಅನೇಕ ಶಾಸಕರು ಸಭೆಗೆ ಹಾಜರಾಗಿದ್ದಾರೆ. ಕೆಲವರು ನನ್ನ ಒಪ್ಪಿಗೆ ತೆಗೆದುಕೊಂಡು ಸಭೆಗೆ ಗೈರು ಆಗಿದ್ದಾರೆ. ಶಾಸಕ ರಾಮಲಿಂಗಾರೆಡ್ಡಿ ಅವರು ವಿದೇಶದಲ್ಲಿದ್ದಾರೆ. ಸುಬ್ಬಾರೆಡ್ಡಿ, ರಾಜಶೇಖರ್ ಪಾಟೀಲ್ ಚುನಾವಣೆಯಿಂದ ಬಂದಿಲ್ಲ. ಮಾಜಿ ಸಚಿವರಾದ ರೋಷನ್ ಬೇಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ಸಭೆಗೆ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅವರು ಗೈರಿನ ಬಗ್ಗೆ ಅನುಮತಿ ಕೇಳಿಲ್ಲ. ಆದರೂ ಅವರು ಎಲ್ಲಿಯೂ ಹೋಗಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬರೇ ಸೋಲಿಗೆ ಹೊಣೆಯಲ್ಲ. ನಾವೆಲ್ಲರೂ ಹೊಣೆಯನ್ನು ಹೊರುತ್ತೇವೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅವಶ್ಯಕತೆಯಿದೆ. ಶೇ. 20ರಷ್ಟು ಮತ ಕಾಂಗ್ರೆಸ್‍ಗೆ ಬಂದಿದೆ. ಸೋಲುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಅಸ್ಥಿತ್ವ ಮುಗಿದಂತೆ ಅಲ್ಲ. ಹಿಂದೆಯೂ ಪಕ್ಷ ಸೋತು, ಮತ್ತೆ ಮೇಲೆದ್ದು ಬಂದಿತ್ತು. ಹೀಗಾಗಿ ನಾವೆಲ್ಲರೂ ರಾಹುಲ್ ಗಾಂಧಿ ಅವರ ಬೆನ್ನಿಗೆ ನಿಂತಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನಡೆ ಬಗ್ಗೆ ಚರ್ಚೆ ಮಾಡಲಾಗಿದೆ. ಸರ್ಕಾರವನ್ನು ಅಸ್ಥಿರ ಮಾಡಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಇದನ್ನು ಎದುರಿಸಲು ನಾವೆಲ್ಲರೂ ಸಿದ್ಧರಾಗಿದ್ದೇವೆ. ಮೈತ್ರಿ ಸರ್ಕಾರದಿಂದ ಹೆಚ್ಚಿನ ಕಾರ್ಯಕ್ರಮಗಳು ಜಾರಿಯಾಲಿವೆ. ಈ ಮೂಲಕ ಜನರ ಮನಸ್ಸನ್ನು ಮತ್ತೆ ಗೆಲ್ಲುವ ಎಲ್ಲ ಪ್ರಯತ್ನ ನಡೆಸುತ್ತೇವೆ ಎಂದು ತಿಳಿಸಿದರು.

ಶಾಸಕಾಂಗ ಪಕ್ಷದ ಸಭೆಗೆ ಶಾಸಕರಾದ ಕುಸುಮ ಶಿವಳ್ಳಿ, ಸಚಿವ ಕೆ.ಜೆ ಜಾರ್ಜ್, ಖನೀಸಾ ಫಾತಿಮಾ, ವಿ.ಮುನಿಯಪ್ಪ, ಅಂಜಲಿ ನಿಂಬಾಳ್ಕರ್, ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ಮಹೇಶ್ ಕುಮಟಳ್ಳಿ, ಪ್ರಸಾದ್ ಅಬ್ಬಯ್ಯ, ಎಸ್.ಟಿ,ಸೋಮಶೇಖರ್, ಆನಂದ್ ಸಿಂಗ್, ಶಾಸಕ ಪ್ರತಾಪ್ ಗೌಡ ಪಾಟೀಲ್, ಶಿವರಾಂ ಹೆಬ್ಬಾರ್, ಬಸವನಗೌಡ ದದ್ದಲ್, ಅಮರೇಗೌಡ ಬಯ್ಯಾಪುರ ಸೇರಿದಂತೆ ಅನೇಕರು ಹಾಜರಿದ್ದರು.