Connect with us

Bengaluru City

ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ: ಸಿದ್ದರಾಮಯ್ಯ

Published

on

– ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ
– ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗ್ತಿದ್ದಾರೆ

ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಸಂವಿಧಾನಾತ್ಮಕ ಮುಖ್ಯಮಂತ್ರಿ ಒಬ್ಬರಿದ್ದರೆ, ಅಸಂವಿಧಾನಿಕವಾಗಿ ಇನ್ನೊಬ್ಬರು ಮುಖ್ಯಮಂತ್ರಿ ಇದ್ದಾರೆ. ವಿಜಯೇಂದ್ರ ಇನ್ನೋರ್ವ ಮುಖ್ಯಮಂತ್ರಿ, ಇನ್ನೊಂದು ಸಲಾ ಹೇಳಲಾ ಎಂದು ಎರಡು ಬಾರಿ ವಿಜಯೇಂದ್ರನ ಹೆಸರು ಹೇಳುವ ಮೂಲಕ ಇದು ನಾನು ಹೇಳಿದ್ದಲ್ಲ ಬಿಜೆಪಿ ಶಾಸಕರೇ ಹೇಳಿರುವುದು ಎಂದು ಸಮರ್ಥನೆ ನೀಡಿದರು.

ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಯಡಿಯೂರಪ್ಪ ಹತ್ತಿರ ಹೋದರೆ ವಿಜಯೇಂದ್ರ ಬಳಿ ಹೋಗು ಅಂತಾರೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ ಎನ್ನುವುದು ಶುದ್ದ ಸುಳ್ಳಾಗಿದೆ. ಭಿನ್ನಮತದ ವಿಷಯವನ್ನು ತಪ್ಪಿಸಲು ಜಾರಕಿಹೊಳಿ ಈ ಹೇಳಿಕೆ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಹಿಂದೆ ಹೋಗಿರೋದು ಮಹೇಶ್ ಕುಮಟಳ್ಳಿ ಮಾತ್ರ. ಕೆಲವರು ಅಧಿಕಾರಕ್ಕೆ ಹೋದರು, ಇನ್ನೂ ಕೆಲವರು ದುಡ್ಡು ತೆಗೆದುಕೊಂಡು ಹೋಗಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇರುವುದು ನಿಜವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಯತ್ನಾಳ್ ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕ ಎಂದು ಹೇಳುತ್ತಾರೆ ಅಂತ ಜೆ.ಪಿ.ನಡ್ಡಾಗೆ ಚಡ್ಡಾ ಎಂದು ವ್ಯಂಗ್ಯವಾಡಿದರು. ಭಿನ್ನಮತ ಇನ್ನೂ ಬೆಳಿತಿದೆ. ಆಗಾಗ ಬಿಜೆಪಿಯವರು ನನ್ನ ಭೇಟಿ ಮಾಡುತ್ತಾರೆ. ಬಿಜೆಪಿಯ ಕೆಲ ಶಾಸಕರು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಭಿನ್ನಮತದಲ್ಲಿ ನಾವು ಕೈ ಹಾಕಲ್ಲ. ಮೊದಲು ಬಿಜೆಪಿ ಸರ್ಕಾರ ಬಿದ್ದು ಹೋಗಲಿ. ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದರು.