Thursday, 14th November 2019

ಜಮೀರ್ ಅಹ್ಮದ್ ಕೆಲಸ ಮಾಡೋ ವ್ಯಕ್ತಿ, ಅದಕ್ಕೆ ಮಂತ್ರಿ ಮಾಡಿದೆ: ಸಿದ್ದರಾಮಯ್ಯ

– ಎಲ್ಲರ ಜೊತೆ ಬೆರೆತು ಕೆಲಸ ಮಾಡುವ ಹೃದಯವಂತ ಜಮೀರ್
– ಮುಸ್ಲಿಂರನ್ನ, ಕ್ರಿಶ್ಚಿಯನ್‍ರನ್ನು ಕಡೆಗಣಿಸಿದ ಬಿಜೆಪಿಯಿಂದ ‘ಸಬ್ ಕಾ ವಿಕಾಸ್’ ಜಪ

ಬಾಗಲಕೋಟೆ: ಸಚಿವ ಜಮೀರ್ ಅಹ್ಮದ್ ಅವರನ್ನು ಮಂತ್ರಿ ಮಾಡಲು ಬೇರೆಯವರು ಅಸಮಾಧಾನ ಆಗುತ್ತಾರೆಂದು ಕೆಲವರು ಹೇಳಿದರು. ಆದರೂ ಅವರನ್ನೇ ಸಚಿವರನ್ನಾಗಿ ಮಾಡಿದೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಆಹಾರ ಹಾಗೂ ನಾಗರಿಕ ಸಬರಾಜು ಸಚಿವರ ಪರ ಬ್ಯಾಟ್ ಬೀಸಿದ್ದಾರೆ.

ಬಾದಾಮಿಯಲ್ಲಿ ನಡೆದ ಅಂಜುಮ್ ಎ ಇಸ್ಲಾಂ ಸಂಸ್ಥೆಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಸಿಎಂ, ಸಚಿವ ಜಮೀರ್ ಅಹ್ಮದ್ ಎಲ್ಲರ ಜೊತೆ ಬೆರೆತು ಕೆಲಸ ಮಾಡುವ ಹೃದಯವಂತ. ಜಮೀರ್ ಅವರೊಂದಿಗೆ ಒಟ್ಟು ಏಳು ಜನರು ಕಾಂಗ್ರೆಸ್ ಸೇರಿದ್ದರು. ಎಲ್ಲರಿಗೂ ವಿಧಾನಸಭಾ ಚುನಾವಣೆ ಟಿಕೆಟ್ ಕೊಟ್ಟಿದ್ದೆ. ಅವರಲ್ಲಿ ಮೂವರು ಗೆದ್ದರು. ಜಮೀರ್ ಅಹ್ಮದ್ ಅವರು ಮಂತ್ರಿ ಮಾಡುವಂತೆ ಕೇಳಿಕೊಂಡು ಬರಲಿಲ್ಲ. ಆದರೂ ಕಾಂಗ್ರೆಸ್ ಪಕ್ಷ ಅವರನ್ನ ಮಂತ್ರಿ ಮಾಡಿದೆ ಎಂದು ಸಚಿವರನ್ನು ಹೊಗಳಿದರು. ಇದನ್ನು ಓದಿ: ಪುಟ್ಟರಂಗಶೆಟ್ಟಿ ಹ್ಯಾಟ್ರಿಕ್ ಹೀರೋ: ಸಿದ್ದರಾಮಯ್ಯ

ನಾನು ಹಾಗೂ ಸಚಿವ ಜಮೀರ್ ಅಹ್ಮದ್ ಎಲ್ಲ ವರ್ಗದ ಜನರ ಪರವಾಗಿದ್ದೇವೆ. ವಿಶೇಷವಾಗಿ ಎಲ್ಲ ಜಾತಿಯ ಬಡ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ. ನಾನು ಅಕ್ಕಿ, ಹಾಲು ಕೊಟ್ಟೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನಿಧಿ ನೀಡಿರುವೆ ಎಂದ ಅವರು, ಇಲ್ಲಿ ಯಾರು ಯಾರ ಗುಲಾಮರಲ್ಲ. ಅಧಿಕಾರ ಸಿಕ್ಕಾಗ ಜನರ ಸೇವೆ ಮಾಡುವುದನ್ನು ಕಲಿಯಬೇಕು. ಇದು ನಮ್ಮ ಕರ್ತವ್ಯ ಕೂಡ ಎಂದು ಮಾಜಿ ಸಿಎಂ ಹೇಳಿದರು.

ದೇಶದ ಶೇ. 14 ಮುಸ್ಲಿಮರು, ಶೇ. 2 ರಷ್ಟು ಕ್ರಿಶ್ಚಿಯನ್ ರನ್ನ ಬಿಟ್ಟು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಬಿಜೆಪಿಯವರು ಹೇಳುತ್ತಾರೆ. ಇದು ಯಾವ ರೀತಿಯ ಸಬ್ ಕಾ ವಿಕಾಸ್ ರೀ ಮಿಸ್ಟರ್ ಮೋದಿ ಅವರೇ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ನನ್ನ ಅಧಿಕಾರ ಅವಧಿಯಲ್ಲಿ ಅನೇಕ ಜಯಂತಿಗಳನ್ನು ಜಾರಿಗೆ ತಂದಿದ್ದೇನೆ. ಆದರೆ ಟಿಪ್ಪು ಜಯಂತಿಗೆ ಕೆಲವರು ವಿರೋಧ ಮಾಡಿದರು. ಅವರು ಆರೋಪಿಸುವಂತೆ ಟಿಪ್ಪು ಮತಾಂದನಾಗಿಲ್ಲ. ಟಿಪ್ಪು ದೇಶಪ್ರೇಮಿ, ಸ್ವತಂತ್ರ ಪ್ರೇಮಿ. ಆದರೂ ಅವರ ಬಗ್ಗೆ ಸುಮ್ನೆ ಅಪಪ್ರಚಾರ ಮಾಡಿದರು. ಬಿಜೆಪಿಯವರು ಡೋಂಗಿಗಳು ಟಿಪ್ಪು ಜಯಂತಿಗೆ ಬಿಡಲ್ಲ ಎನ್ನುತ್ತಾರೆ. ಅದೇನೇ ಆಗಲಿ ಎಲ್ಲ ಜಯಂತಿ ರೀತಿ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಸವಾಲು ಹಾಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *