Monday, 24th February 2020

ಡಿಕೆಶಿ ಭೇಟಿಗೆ ತೆರಳಿದ್ದ ಸಿದ್ದರಾಮಯ್ಯಗೆ ಕೊನೆ ಕ್ಷಣದಲ್ಲಿ ಇಡಿಯಿಂದ ಅನುಮತಿ ನಿರಾಕರಣೆ

ನವದೆಹಲಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.

ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹೀಗಾಗಿ ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಇಡಿ ಅಧಿಕಾರಿಗಳ ಅನುಮತಿ ಪಡೆದು ಆಸ್ಪತ್ರೆಗೆ ತೆರಳಿದ್ದರು. ಬೆಂಬಲಿಗರ ಜೊತೆಗೆ ಆಸ್ಪತ್ರೆಯಲ್ಲಿ ಡಿಕೆಶಿ ಭೇಟಿಗೆ ಕಾಯುತ್ತಾ ಕುಳಿತಿದ್ದರು. ಆದರೆ ವಾರ್ಡ್ ಪ್ರವೇಶಿಸಿದ್ದ ಸಿದ್ದರಾಮಯ್ಯ ಅವರನ್ನು ಕೊನೆಯ ಕ್ಷಣದಲ್ಲಿ ತಡೆದ ಇಡಿ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಅವರನ್ನು ಕೂಡ ವಾರ್ಡ್ ಗೇಟ್ ಒಳಗೆ ಬಿಡದೆ ದೆಹಲಿ ಪೊಲೀಸರು ದಿಗ್ಬಂಧನ ಹಾಕಿದರು. ಹೀಗಾಗಿ ಪೊಲೀಸರು ಹಾಗೂ ಡಿ.ಕೆ.ಸುರೇಶ್ ಅವರ ಮಧ್ಯೆ ವಾಗ್ವಾದ
ನಡೆಯಿತು. ಭೇಟಿಗೆ ಅವಕಾಶ ಸಿಗದೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಆಸ್ಪತ್ರೆ ಹೊರ ಬಂದರು. ಈ ವೇಳೆ ಆಸ್ಪತ್ರೆ ಗೇಟ್ ಬಳಿ ಡಿಕೆ.ಸುರೇಶ್ ಅವರನ್ನು ಭೇಟಿಯಾದ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿ ಹೊರಟು ಹೋದರು.

ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಆಗಮಿಸಿ ಡಿ.ಕೆ ಶಿವಕುಮಾರ್ ಆರೋಗ್ಯ ವಿಚಾರಿಸಿದ್ದರು. ಬಳಿಕ ಪರಿಷತ್ ಸದಸ್ಯ ಐವಾನ್ ಡಿಸೋಜಾ, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಬೈರತಿ ಸುರೇಶ್ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಆಸ್ಪತ್ರೆ ಒಳಗೆ ಬಿಡಲು ದೆಹಲಿ ಪೋಲಿಸರು ನಿರಾಕರಿಸಿದ್ದರು.

ಸಮನ್ಸ್ ನೀಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ನಾಲ್ಕು ದಿನ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳು ವಶಕ್ಕೆ ಪಡೆದ ಮೇಲೆ 10 ದಿನ ವಿಚಾರಣೆ ನಡೆಸಿದ್ದಾರೆ. ಒಟ್ಟು 14 ದಿನ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗಿದ್ದು, ಜಾಮೀನು ನೀಡಬೇಕೆಂದು ಡಿಕೆಶಿ ಪರ ವಕೀಲರು ಶುಕ್ರವಾರ ನ್ಯಾಯಾಲಯದ ಮುಂದೆ ಮನವಿ ಮಾಡುವ ಸಾಧ್ಯತೆಗಳಿವೆ. ಇತ್ತ ಇಡಿ ಪರ ವಕೀಲರು ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆ ಹಾಕಬೇಕಿದೆ. ಹೆಚ್ಚುವರಿ ನಾಲ್ಕು ದಿನ ಕಸ್ಟಡಿ ವಿಸ್ತರಿವಂತೆ ಇಡಿ ಮನವಿ ಮಾಡುವ ಸಾಧ್ಯತೆಗಳಿವೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಗುರುವಾರ ಇ.ಡಿ. ಮುಂದೆ ಹಾಜರಾಗಿದ್ದರು. ದೆಹಲಿಯ ಲೋಕಭವನದಲ್ಲಿರೋ ಇಡಿ ಕಚೇರಿಗೆ ಬೆಳಗ್ಗೆ  ಹಾಜರಾದ ಐಶ್ವರ್ಯಗೆ ಇಡಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾರೆ. ಐಶ್ವರ್ಯ ಹೆಸರಲ್ಲಿರುವ ಆಸ್ತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಡಿ ಅಧಿಕಾರಿಗಳ ಪ್ರಶ್ನೆಯನ್ನು ಡಿಕೆಶಿ ಪುತ್ರಿ ಸಮರ್ಥವಾಗಿಯೇ ಎದುರಿಸಿದ್ದಾರೆ. ವಿಚಾರಣೆಗೆ ಮುನ್ನ ತಂದೆ ಡಿಕೆಶಿಯನ್ನು ಐಶ್ವರ್ಯ ಭೇಟಿಯಾಗಿದ್ದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *