Connect with us

Bengaluru City

ಮೆಟ್ರೋಗೆ ಹಣ ಬಿಡುಗಡೆ ಮಾಡಿದ್ದಕ್ಕೆ ಅಭಿನಂದನೆಯ ಜಾಹೀರಾತು- ಸರ್ಕಾರದ ವಿರುದ್ಧ ಹೆಚ್‍ಡಿಕೆ ಕಿಡಿ

Published

on

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಕೊರೊನಾ ವೈರಸ್ ಹೊಡೆತಕ್ಕೆ ರಾಷ್ಟ್ರವೇ ತತ್ತರಿಸಿದೆ. ಜನ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಸೂತಕದ ಸಂದರ್ಭದಲ್ಲಿ ರಾಜ್ಯಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ನಗುಮೊಗದ ಜಾಹೀರಾತೊಂದನ್ನು ನೀಡಿದೆ. ಈ ಮೂಲಕ ಜನರ ನೋವನ್ನು ಗೇಲಿ ಮಾಡಿದೆ. ಇದು ನಿಜಕ್ಕೂ ಆತ್ಮಸಾಕ್ಷಿಯ ನಡೆಯಲ್ಲ!

ಮೆಟ್ರೋ 2ನೇ ಹಂತದ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಿದ್ದನ್ನೇ ನೆಪ ಮಾಡಿಕೊಂಡು ಸರ್ಕಾರ ಪ್ರಚಾರಕ್ಕೆ ಧುಮುಕಿದೆ. ರಾಜ್ಯಕ್ಕೆ ಕೇಂದ್ರ ನೀಡುವ ಅನುದಾನವೇನು ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಅದರಲ್ಲಿ ಪ್ರಚಾರ ಪಡೆಯುವ, ಜಾಹೀರಾತು ನೀಡುವ ತುರ್ತು ಏನಿದೆ ಎಂಬುದನ್ನು ಸರ್ಕಾರ ಪರಾಮರ್ಶೆ ಮಾಡಬೇಕಿತ್ತು. ಇದು ಸರ್ಕಾರದ ಹೊಣೆಗೇಡಿತನ.

ಸಮಾಜವೇ ಗಂಡಾಂತರದಲ್ಲಿ ಸಿಲುಕಿರುವಾಗ ಈ ಪ್ರಚಾರ ಪ್ರಿಯತೆ ಏಕೆ? ಜಾಹೀರಾತುಗಳಲ್ಲಿ ನೀವು ಬೀರುವ ನಗು ನೋವಿನಲ್ಲಿರುವವರನ್ನು ಅಣಕಿಸುತ್ತದೆ ಎಂಬ ಸೂಕ್ಷ್ಮತೆ ಇಲ್ಲವೇ? ಜಾಹೀರಾತುಗಳಿಗೆ ನೀಡುವ ಹಣವನ್ನು ವೈದ್ಯಕೀಯ ವ್ಯವಸ್ಥೆಗೆ ಬಳಸಿಕೊಂಡಿದ್ದಿದ್ದರೆ ಯಾರಾದರೂ ಬೇಡವೆನ್ನುತ್ತಿದ್ದರೆ? ಸರ್ಕಾರದ ಪ್ರಚಾರದ ಈ ಹುಚ್ಚು ನಾಚಿಕೆಗೇಡಿನದ್ದು. ಇದನ್ನೂ ಓದಿ: ಬೆಂಗಳೂರು ಮೆಟ್ರೋ 2ಎ ಹಂತ, 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

ಸರ್ಕಾರ ಕೋವಿಡ್ ಅನ್ನು ನಿಭಾಯಿಸಿದ ರೀತಿ ಮತ್ತು ಅದರಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಬಗ್ಗೆ ಆರೋಪಗಳು ಬಂದವು. ಆದರೆ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರ ನೈತಿಕತೆ ಪ್ರಶ್ನೆ ಎದುರಿಸಬಾರದು ಎಂಬ ಕಾರಣಕ್ಕೆ ನಾವೆಲ್ಲರೂ ಸುಮ್ಮನಿದ್ದೆವು. ಆದರೆ, ಕಣ್ಣ ಮುಂದಿನ ಇಂಥ ಬೇಜವಾಬ್ದಾರಿತನ, ಪ್ರಚಾರಪ್ರಿಯತೆಯನ್ನು ಸಹಿಸಲಾಗದು.

ಈ ದುರಿತ ಕಾಲದಲ್ಲಿ ಸರ್ಕಾರ ಜನರ ಪ್ರಾಣ ರಕ್ಷಣೆಗಾಗಿ ಪಣತೊಡಬೇಕೆ ಹೊರತು, ಪ್ರಚಾರದಲ್ಲಿ ತೊಡಗಬಾರದಿತ್ತು. ಬಿಜೆಪಿಯ ಪ್ರಚಾರ ಪ್ರಿಯತೆ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಈ ಸನ್ನಿವೇಶದಲ್ಲಾದರೂ ಅದನ್ನು ನಿಲ್ಲಿಸಿ ಮಾದರಿ ನಡೆ ಅನುಸರಿಸಬೇಕಿತ್ತು. ಜನರ ವಿಶ್ವಾಸ ಗೆಲ್ಲಿ, ಇಲ್ಲದೇ ಹೋದರೆ, ನಿಮ್ಮ ಪ್ರಚಾರಗಳೆಲ್ಲವೂ ಋಣವಾಗುತ್ತದೆ ಎಂದು ಸುಧೀರ್ಘವಾಗಿ ಬರೆದುಕೊಳ್ಳುವ ಮೂಲಕ ಹೆಚ್‍ಡಿಕೆ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಬೆಂಗಳೂರು ನಮ್ಮ ಮೆಟ್ರೋ 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. 14,788 ಕೋಟಿ ವೆಚ್ಚದ 58 ಕಿಮೀ ಉದ್ದದ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. 2ಎ ಹಂತ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್.ಪುರಂ ವರೆಗೆ ಇರಲಿದೆ. 2ಬಿ ಹಂತ ಹೆಬ್ಬಾಳ ಮಾರ್ಗವಾಗಿ ಕೆ.ಆರ್.ಪುರಂ ಟು ಏರ್ ಪೋರ್ಟ್ ವರೆಗೆ ವಿಸ್ತರಣೆ ಆಗಲಿದೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದರು.

Click to comment

Leave a Reply

Your email address will not be published. Required fields are marked *