Connect with us

Chamarajanagar

ಬೆಂಕಿ ಆರಿಸಲೆಂದು ಕರೆದೊಯ್ದು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹಲ್ಲೆ?

Published

on

– 7 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‍ಐಆರ್

ಚಾಮರಾಜನಗರ: ಬೆಂಕಿ ಆರಿಸಬೇಕೆಂದು ನೆಪ ಹೇಳಿ ಕರೆದೊಯ್ದ ಅರಣ್ಯ ಇಲಾಖೆ ಸಿಬ್ಬಂದಿ, ನಾಲ್ವರು ಸ್ಥಳೀಯರಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕಾವೇರಿ ವನ್ಯಜೀವಿ ಧಾಮದ ಕೊತ್ತನೂರು ಬೀಟ್‍ನ 7 ಮಂದಿ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಿದೆ. ಕೊಳ್ಳೇಗಾಲ ತಾಲೂಕಿನ ಜಾಗೇರಿ ರಾಶಿಬೋಳಿ ತಾಂಡದ ವಿನ್ಸೆಂಟ್ ಈ ಗಂಭೀರ ಆರೋಪ ಮಾಡಿದ್ದು, ಬೆಂಕಿ ಆರಿಸಬೇಕೆಂದು ನನ್ನನ್ನೂ ಸೇರಿ ನಾಲ್ವರನ್ನು ಕಾಡಿಗೆ ಕರೆದೊಯ್ದ ಅರಣ್ಯ ಇಲಾಖೆ ಸಿಬ್ಬಂದಿಯಾದ ಮಧುಕುಮಾರ್, ಅನಿಲ್ ವಾಲೇಕರ್, ಪುಟ್ಟಲಿಂಗ, ರಾಘವೇಂದ್ರ ರಾಥೋಡ್, ಅನಿಲ್, ಮಹೇಶ್ ಹಾಗೂ ಮಾದೇಶ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಾಡಿಗೆ ಬೆಂಕಿಯಿಟ್ಟು ಶಿಖಾರಿ ಮಾಡಲು ಬಂದಿದ್ದಾರೆ ಎಂದು ನಮ್ಮ ವಿರುದ್ಧವೇ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆರೋಪವೇನು:
ಅರಣ್ಯ ವಾಚರ್ರಾದ ಅಯ್ಯನ್ ದೊರೆ ಅವರ ಮಗ ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಆರೋಪದ ಮೇಲೆ 2018ರಲ್ಲಿ ಬಂಧಿಸಲಾಗಿತ್ತು. ಒಂದು ವರ್ಷ ಕಾರಾಗೃಹದ್ದಲ್ಲಿದ್ದು ಬಂದಿದ್ದಾನೆ. ಮಗನನ್ನು ಜೈಲಿಗೆ ಕಳುಹಿಸಿದ ದ್ವೇಷ ಇಟ್ಟುಕೊಂಡ ಅಯ್ಯನ್ ದೊರೆ ಫಾರೆಸ್ಟ್ ಗಾರ್ಡ್ ಗಳಿಗೆ ಹಣ ನೀಡಿ ನಮಗೆ ಹೊಡೆಸಿದ್ದಲ್ಲದೆ ಮೊಕದ್ದಮೆ ಹಾಕಿಸಿದ್ದಾರೆ ಎಂಬುದು ವಿನ್ಸೆಂಟ್ ಆರೋಪವಾಗಿದೆ.

ಕಳೆದ ಏಪ್ರಿಲ್ 21ರ ಬೆಳಗಿನ ಜಾವ ಕಾಡಿಗೆ ಬೆಂಕಿ ಬಿದ್ದಿದ್ದು, ಆರಿಸಬೇಕೆಂದು ವಿನ್ಸೆಂಟ್, ಸಗಾಯ್ ರಾಜ್, ಶಬರಿನಾಥನ್, ಜ್ಞಾನಪ್ರಕಾಶ್ ಅವರನ್ನು ಕರೆದೊಯ್ದು ಅರ್ಧ ತಾಸಿನ ಬಳಿಕ ಕೈಕಾಲುಗಳನ್ನು ಕಟ್ಟಿ ಭೀಮೆಶ್ವರಿ ಕಳ್ಳಬೇಟೆ ತಡೆ ಕ್ಯಾಂಪ್ ಗೆ ಕರೆತಂದು ಗನ್, ಲಾಠಿಯಿಂದ ಹೊಡೆದು ಹಲ್ಲೆ ದೃಶ್ಯವನ್ನು ವಾಚರ್ ಅಯ್ಯನ್ ದೊರೆಗೆ ಕಳುಹಿಸಿದ್ದಾರೆ ಎಂದು ವಿನ್ಸೆಂಟ್ ದೂರಿದ್ದಾರೆ.

ನಮ್ಮ ಮೇಲೆ ಹಲ್ಲೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಗೆ 10-15 ಸಾವಿರ ರೂ. ಹಣ ಕೊಡುವ ಜೊತೆಗೆ ಕ್ಯಾಂಪಿನಲ್ಲಿ ಅವರಿಗೆ 7 ಸಾವಿರ ರೂ. ಖರ್ಚು ಮಾಡಿ ಮದ್ಯದ ಪಾರ್ಟಿ ಕೊಡಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡುವ ವಿಡಿಯೋವನ್ನು ಅಯ್ಯನ್ ದೊರೆ ಮಗ ರಾಜ ವೈರಲ್ ಮಾಡಿದ ಬಳಿಕ ಈ ವಿಚಾರ ನಮಗೆ ತಿಳಿಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಹನೂರು ಪೊಲೀಸ್ ಠಾಣೆಯವರೂ ಕೂಡ ಕಳೆದ ಒಂದು ತಿಂಗಳಿನಿಂದ ದೂರು ಪಡೆಯಲು ಸತಾಯಿಸಿ ಕಳೆದ 1ರಂದು ಪ್ರಕರಣ ದಾಖಲಿಸಿದ್ದಾರೆ ಎಂದು ವಿನ್ಸೆಂಟ್ ಆರೋಪಿಸಿದ್ದಾರೆ. ಸದ್ಯ ಹನೂರು ಠಾಣೆಯಲ್ಲಿ 7 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.