Friday, 22nd November 2019

Recent News

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ತಲೆ ತಲಾಂತರದಿಂದ ಬಂದ ಸಂಪ್ರದಾಯಕ್ಕೆ ಬ್ರೇಕ್

– ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ

ಕಾರವಾರ: ಶಿರಸಿ ಎಂದಾಕ್ಷಣ ಮಾರಿಕಾಂಬ ದೇವಸ್ಥಾನವೇ ನೆನಪಿಗೆ ಬರುತ್ತದೆ. ಅದರಲ್ಲೂ ರಾಜ್ಯದಲ್ಲೇ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯೂ ಈ ದೇವಿಗೆ ಸಲ್ಲಿಕೆಯಾಗುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ರಥ ಕಟ್ಟಲು ಕಾಡಿನ ಮರ ಕಡಿಯುವ ಸಂಪ್ರದಾಯವಿದ್ದು, ಸದ್ಯ ಈ ಪದ್ಧತಿಗೆ ಸರ್ಕಾರ ಅಧಿಕೃತವಾಗಿ ಬ್ರೇಕ್ ಹಾಕಿದೆ.

ಹೌದು, 2018 ರಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ಶಿರಸಿಯ ಬಿನಕಳ್ಳಿಯ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅನಧಿಕೃತ ಪ್ರವೇಶ ಮಾಡಿ ತಾರೆ, ನಂದಿ, ಮತ್ತಿ, ಕಿಂದಳ ಮರಗಳನ್ನು ಕಡಿದು ನಾಟ ಹಾಗೂ ಜಲಾವು ಮಾಡಿದ ಸಂಬಂಧ ಶಿರಸಿ ವಲಯ ಅರಣ್ಯಾಧಿಕಾರಿ ದೇವಾಲಯದ ಧರ್ಮದರ್ಶಿ ಮಂಡಳಿ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆಡಳಿತ ಮಂಡಳಿ ಕೋರ್ಟಿನಲ್ಲಿ 80 ಸಾವಿರ ರೂ.ದಂಡ ಸಹ ತುಂಬಿತ್ತು.

ಅರಣ್ಯ ಇಲಾಖೆ ನೀಡಿದ ನೋಟಿಸ್ ನಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶಿಸಿ ಅಮೂಲ್ಯ ಮರ, ಗಿಡಗಳನ್ನು ನಾಶ ಪಡಿಸಿರುವುದು, ಇವುಗಳನ್ನು ಆಶ್ರಯಿಸಿದ ವನ್ಯಜೀವಿಗಳಿಗೆ ತೊಂದರೆಯಾಗುತ್ತವೆ ಹೀಗಾಗಿ ಗಂಭೀರ ಅಪರಾಧ ಪ್ರಕರಣವಾಗಿದೆ. ಅಲ್ಲದೇ ಜಾಮೀನು ರಹಿತ ಪ್ರಕರಣವೂ ಆಗಿದ್ದು, ಮತ್ತೆ ಇಂತಹ ಪ್ರಕರಣ ನಡೆದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ಕಲಂ24(ಇ), ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಇನ್ನು ಮುಂದೆ ಸಂಪ್ರದಾಯದ ಹೆಸರಿನಲ್ಲಿ ಕಾಯ್ದಿಟ್ಟ ಅರಣ್ಯದಲ್ಲಿ ಅನಧಿಕೃತ ಪ್ರವೇಶ ಮಾಡಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.

ಮುಂಬರುವ ಮಾರ್ಚ್ ನಲ್ಲಿ ಜಾತ್ರೆ ನಡೆಯಲಿದ್ದು, ಹೀಗಾಗಿ ಈ ಕುರಿತು ಕಮಿಟಿಯಲ್ಲಿ ಚರ್ಚೆ ನಡೆದಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ಆಚರಣೆ ಮಾಡಿದಲ್ಲಿ ಕೋರ್ಟ್ ಕೇಸ್ ಎದುರಿಸಬೇಕೆಂಬ ಭಯದ ಜೊತೆ ಬಂಧನವಾಗುವ ಭೀತಿ ಕೂಡ ಕಮಿಟಿ ಸದಸ್ಯರಲ್ಲಿ ಎದುರಾಗಿದ್ದು, ಧಾರ್ಮಿಕ ಆಚರಣೆಯನ್ನು ಕೈ ಬಿಡುವ ಕುರಿತು ಕಮಿಟಿ ಚರ್ಚೆ ನಡೆಸಿದೆ.

ಈ ಕುರಿತು ಪಬ್ಲಿಕ್ ಟಿ.ವಿ ಜೊತೆ ಮಾತನಾಡಿದ ಮಾರಿಕಾಂಬ ಕಮಿಟಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ನಾವು ಈ ಹಿಂದೆ ಮರ ಕಡಿದ ಕುರಿತು ಕೋರ್ಟಿನಲ್ಲಿ ದಂಡ ಕಟ್ಟಿದ್ದೇವೆ. ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಹಾಗೂ ಇಂದಿನ ಕಾಲಮಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕಿದ್ದು. ಈ ಬಾರಿ ಮರ ಕಡಿಯುವ ಕಾರ್ಯಕ್ರಮವನ್ನು ನಿಲ್ಲಿಸುವ ತೀರ್ಮಾನ ಕೈಗೊಳ್ಳುತಿದ್ದೇವೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ತಲಾ ತಲಾಂತರದಿಂದ ಬಂದ ಸಂಪ್ರಾದಾಯಕ್ಕೆ ಈ ಬಾರಿ ಬ್ರೇಕ್ ಬೀಳಲಿದ್ದು, ಜಾತ್ರೆಯಲ್ಲಿ ಒಂಬತ್ತು ದಿನದ ಸಂಪ್ರದಾಯ ಬದಲಾಗಲಿದೆ.

Leave a Reply

Your email address will not be published. Required fields are marked *