Connect with us

Dharwad

ತವರಿಗೆ ಹೋಗಲಾಗದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಣ್ಣೀರಿಟ್ಟ ವಿದೇಶಿ ಪ್ರಜೆ

Published

on

-ಮಹಿಳೆಯ ಕಣ್ಣೀರು ನೋಡಿ ಮರುಗಿದ ಜನ
-ಯೋಗ, ಆಧ್ಯಾತ್ಮ ಅಧ್ಯಯನಕ್ಕಾಗಿ ಭಾರತಕ್ಕೆ ಆಗಮನ

ಧಾರವಾಡ: ತನ್ನ ತವರಿಗೆ ಹೋಗಲಾಗದೇ ಭಾರತದಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆ ಕಣ್ಣೀರು ಹಾಕುತ್ತ ಜಿಲ್ಲಾಧಿಕಾರಿ ಕಚೇರಿ ಎದುರು ನಿಂತ ಘಟನೆ ಧಾರವಾಡದಲ್ಲಿ ನಡೆದಿದೆ.

ಆಸ್ಟ್ರೇಲಿಯಾ ಮೂಲದ ನೈಶಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಣ್ಣೀರು ಹಾಕುತ್ತಿದ್ದ ಮಹಿಳೆ. ಲಾಕ್‍ಡೌನ್ ಮುಂದೆ ಭಾರತೀಯ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಅಧ್ಯಯನ ಮಾಡಲು ಆಸ್ಟ್ರೇಲಿಯಾದಿಂದ ಬಂದಿದ್ದರು. ಪ್ರವಾಸ ಮಾಡುತ್ತ ಹುಬ್ಬಳ್ಳಿಗೆ ಬಂದಾಗ ಲಾಕ್‍ಡೌನ್ ಘೋಷಣೆಯಾಗಿತ್ತು. ಹೀಗಾಗಿ ಹುಬ್ಬಳ್ಳಿ ನಗರದಲ್ಲಿಯೇ ಸಿಲುಕಿದ್ದರು.

ಸದ್ಯ ವಿಮಾನಯಾನ ಆರಂಭಗೊಳ್ಳುತ್ತಿದ್ದಂತೆ ತಮಗೆ ಸಹಾಯ ಮಾಡುವಂತೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿಯಲ್ಲಿ ಅಲೆದಾಡಿದ್ರೂ ನೈಶಾಗೆ ಯಾರಿಂದಲೂ ಸಹಾಯ ಸಿಗದಿದ್ದಾಗ ಮುಖ್ಯದ್ವಾರದ ಬಳಿ ಕಣ್ಣೀರು ಹಾಕುತ್ತಾ ನಿಂತಿದ್ದರು.

ಈ ವೇಳೆ ನೈಶಾರನ್ನು ಗಮನಿಸಿದ ಎಸ್.ಪಿ. ವರ್ತಿಕಾ ಕಟಿಯಾರ್, ಮಹಿಳೆಯ ಸಮಸ್ಯೆಯನ್ನು ಆಲಿಸಿ ಧೈರ್ಯ ತುಂಬಿದ್ದಾರೆ. ಬಳಿಕ ಮಹಿಳೆಗೆ ದೆಹಲಿಗೆ ತೆರಳಲು ಪಾಸ್ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಮಾನಯಾನ ಆರಂಭಗೊಂಡಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಈ ಸಮಯದಲ್ಲಿ ಸಹಾಯ ಮಾಡೋದು ನಮ್ಮ ಕರ್ತವ್ಯ. ಇಂದು ಸಂಜೆಯೊಳಗಾಗಿ ಮಹಿಳೆಗೆ ದೆಹಲಿ ತಲುಪಲು ಅಗತ್ಯ ಪಾಸ್ ಕೊಡುವಂತೆ ಸೂಚಿಸಿದ್ದಾರೆ. ದೆಹಲಿಯಲ್ಲಿ ಆಸ್ಟ್ರೇಲಿಯಾ ರಾಯಭಾರ ಕಚೇರಿಗೆ ತೆರಳುವಂತೆ ಎಸ್.ಪಿ. ತಿಳಿಸಿದ್ದಾರೆ.

ಮಹಿಳೆಯ ವೀಸಾ ಅವಧಿ ಸಹ ಮುಗಿದಿದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಸಹಾಯಕಳಾಗಿ ಕಣ್ಣೀರು ಹಾಕುತ್ತಿದ್ದರು ಎಂದು ಎನ್ನಲಾಗಿದೆ. ಲಾಕ್‍ಡೌನ್ ಆದಾಗಿನಿಂದ ನೈಶಾ ಹುಬ್ಬಳ್ಳಿಯ ಲಾಡ್ಜ್ ನಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇದೀಗ ತವರಿಗೆ ತೆರಳಲು ಮುಂದಾಗಿದ್ದಾರೆ. ಭಾಷೆ ಬಾರದ ನಾಡಿನಲ್ಲಿ ಸಿಲುಕಿ ಮಹಿಳೆ ಕಣ್ಣೀರು ಹಾಕುತ್ತಿರೋದನ್ನು ನೋಡಿ ಧಾರವಾಡದ ಜನ ಮರುಗಿದರು.