Tuesday, 16th July 2019

ಆರತಕ್ಷತೆಯಲ್ಲಿ ಊಟ ಶಾರ್ಟೇಜ್ ಆಗಿದ್ದಕ್ಕೆ ಮದ್ವೆ ಕ್ಯಾನ್ಸಲ್?

– ವಧು ನಾಪತ್ತೆಯಾಗಿದ್ದಾಳೆ ಎಂದು ವರನ ಕಡೆಯಿಂದ ಆರೋಪ

ಬೆಂಗಳೂರು: ಮದುವೆ ಆರತಕ್ಷತೆಯಲ್ಲಿ ಊಟ ಸಾಲದಿದ್ದಕ್ಕೆ ಮದುವೆಯೇ ಮುರಿದುಬಿದ್ದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ.

ಕೊಣನಕುಂಟೆಯ ಬಳಿಯ ಸೌಧಮಿನಿ ಛತ್ರದಲ್ಲಿ ಘಟನೆ ನಡೆದಿದ್ದು, ಶುಕ್ರವಾರ ರಾತ್ರಿ ವಸಂತನಗರ ನಿವಾಸಿ ನಾಗೇಂದ್ರ ಪ್ರಸಾದ್ ಹಾಗೂ ಕನಕಪುರ ಮೂಲದ ಶಿಲ್ಪ ಅವರ ಮದುವೆಯ ಆರತಕ್ಷತೆ ನಡೆಯುತ್ತಿತ್ತು. ಈ ವೇಳೆ ವರನ ಕಡೆಯ 30 ಜನರಿಗೆ ಊಟ ಸಿಗಲಿಲ್ಲ. ಊಟದ ವಿಚಾರವಾಗಿ ಗಂಡಿನ ಕಡೆಯವರು ಹೆಣ್ಣಿನ ಮನೆಯವರ ಜೊತೆ ಗಲಾಟೆ ಮಾಡಿದ್ದರಂತೆ. ಹೆಣ್ಣಿನ ಕಡೆಯವರು ಗಂಡಿನ ಮನೆಯವರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೂ ಒಪ್ಪದ ವರ ನಾಗೇಂದ್ರ ಮತ್ತು ಆತನ ಸಂಬಂಧಿಗಳು ಮದುವೆಯನ್ನೇ ನಿರಾಕರಿಸಿದ್ದರು ಅಂತಾ ಹೇಳಲಾಗಿತ್ತು.

ಆದ್ರೆ ಇದೀಗ ಈ ಪ್ರಕರಣ ತಿರುವು ಪಡೆದಿದ್ದು, ಗಂಡಿನ ಕಡೆಯವರು ರಾತ್ರಿ ಗಲಾಟೆ ಮಾಡಿದವರು ನಮ್ಮವರಲ್ಲ. ಯಾರೂ ಕುಡಿದು ಬಂದವರಿಂದ ಆದ ಪ್ರಮಾದ ಇದು. ನಮ್ಮ ಹುಡುಗ ಇನ್ನೂ ಕಲ್ಯಾಣಮಂಟಪದಲ್ಲೇ ಇದ್ದಾನೆ. ಮದುವೆ ಮಾಡಿಕೊಳ್ಳೋಕೆ ನಾವ್ ರೆಡಿ. ಆದ್ರೆ ಹುಡುಗಿ ನಾಪತ್ತೆಯಾಗಿದ್ದಾಳೆ ಅಂತಾ ಹುಡುಗನ ಪೋಷಕರು ಹೇಳಿದ್ದಾರೆ.

ಒಟ್ಟಿನಲ್ಲಿ ಇಂದು ಬೆಳಗ್ಗೆ 8.45ರ ಮುಹೂರ್ತಕ್ಕೆ ಆಗಬೇಕಿದ್ದ ಮದುವೆ ಮುರಿದುಬಿದ್ದಿದ್ದು, ಹೆಣ್ಣಿನ ಕಡೆಯವರು ಹುಡುಗಿಯನ್ನು ಕರೆದುಕೊಂಡು ಕಲ್ಯಾಣ ಮಂಟಪದಿಂದ ಹೊರನಡೆದಿದ್ದಾರೆ. ಆದ್ರೆ ಗಂಡಿನ ಕಡೆಯವರು ಮಾತ್ರ ಇನ್ನೂ ಮಂಟಪದಲ್ಲೇ ಇದ್ದಾರೆ.

Leave a Reply

Your email address will not be published. Required fields are marked *