Thursday, 17th October 2019

Recent News

ಟಿಕ್‍ಟಾಕ್‍ನಲ್ಲಿ ವೈರಲ್ ಆಯ್ತು ಉ.ಕ ವಿದ್ಯಾರ್ಥಿಗಳ ಜನಪದ ಹಾಡು

ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ದಿಢೀರನೆ ಜನಪ್ರಿಯರಾದವರು ಸಾಕಷ್ಟು ಜನರಿದ್ದಾರೆ. ಹಾಡಲ್ಲಾಗಿರಬಹುದು, ಡ್ಯಾನ್ಸ್, ಮಿಮಿಕ್ರಿ ಯಾವುದೇ ಮನರಂಜನೆ ಮೂಲಕ ದಿನ ಬೆಳಗಾಗೋದರೊಳಗೆ ಫೇಮಸ್ ಆಗುತ್ತಾರೆ. ಸದ್ಯ ಬಾಗಲಕೋಟೆ ನಗರದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಜನಪದ ಹಾಡಿನ ಮೂಲಕ ಫುಲ್ ಪಾಪ್ಯುಲರ್ ಆಗಿದ್ದಾರೆ.

ವಿದ್ಯಾರ್ಥಿಗಳು ತಯಾರಿಸಿರುವ ಜಾನಪದ ಹಾಡೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈಗಾಗಲೇ ಫೇಮಸ್ ಆಗಿರುವ “ನನ್ನ ಗೆಳತಿ ನನ್ನ ಗೆಳತಿ” ಹಾಡಿನ ಫೀಮೆಲ್ ವರ್ಶನ್ ಹಾಡು “ನನ್ನ ಗೆಳೆಯಾ ನನ್ನ ಗೆಳೆಯಾ” ಹಾಡನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ರಚನೆ ಮಾಡಿದೆ.

ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ರಶ್ಮಿ ಗುಡ್ಡದ ಹಾಡಿ ನೃತ್ಯ ಮಾಡಿದ್ದಾಳೆ. ಹಾಡನ್ನು ಯುಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದು, ಒಂದೇ ದಿನದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿ ಸಖತ್ ಮೆಚ್ಚುಗೆಗೆ ಪಾತ್ರವಾಗಿದೆ.

ಸೌಭಾಗ್ಯ ಹಿರೇಮಠ ಎಂಬ ಇನ್ನೋರ್ವ ವಿದ್ಯಾರ್ಥಿನಿ ಈ ಹಾಡನ್ನು ಬರೆದಿದ್ದು, ಉಳಿದ ಎಂಜಿನಿಯರಿಂಗ್ ಗೆಳೆಯರು ಮ್ಯೂಸಿಕ್, ಕ್ಯಾಮರಾ ವರ್ಕ್ ಹಾಗೂ ಎಡಿಟಿಂಗ್ ವರ್ಕ್ ಮಾಡಿ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕದ ಇಳಕಲ್ ಸೀರೆ ಹಾಗೂ ಮಾಡರ್ನ್ ಡ್ರೆಸ್‍ನಲ್ಲಿ ರಶ್ಮಿ ಗುಡ್ಡದ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ.

ಬಾಗಲಕೋಟೆ ನಗರದ ಶಿರೂರು ಅಗಸಿ, ಮುಚಖಂಡಿ ಕೆರೆಯ ಸೇತುವೆ, ಆಲಮಟ್ಟಿ ಹಿನ್ನೀರು ಬಳಿ ಚಿತ್ರೀಕರಣ ಮಾಡಿದ್ದು, ಪಕ್ಕಾ ಉತ್ತರ ಕರ್ನಾಟಕ ಜನಪದ ಹಾಡು ಈಗ ಫುಲ್ ಫೇಮಸ್ ಆಗಿದೆ. ಕೇವಲ ವಾಟ್ಸಾಪ್ ಫೇಸ್‍ಬುಕ್ ಅಲ್ಲದೆ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ನಾಡಿನ ಮೂಲೆ ಮೂಲೆಯಾದ್ಯಂತ ಟಿಕ್‍ಟಾಕ್‍ನಲ್ಲಿ ಈ ಹಾಡಿಗೆ ಯುವತಿಯರು ಅಭಿನಯಿಸಿ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *