Connect with us

ಸರ್ಕಾರ ಘೋಷಿಸಿದ್ದ ಪರಿಹಾರ ಇನ್ನೂ ತಲುಪಿಲ್ಲ – ಹೂ ಬೆಳೆಗಾರರ ಆರೋಪ

ಸರ್ಕಾರ ಘೋಷಿಸಿದ್ದ ಪರಿಹಾರ ಇನ್ನೂ ತಲುಪಿಲ್ಲ – ಹೂ ಬೆಳೆಗಾರರ ಆರೋಪ

– ಕೊರೊನಾ ಕಾಲದಲ್ಲೂ ಸರ್ಕಾರದ ಪರಿಹಾರ ಸಿಗದೆ ಹೂವಿನ ರೈತರ ಪರದಾಟ

ಗದಗ: ಹೂವಿನ ಕಾಶಿ ಅಂತ ಪ್ರಖ್ಯಾತಿ ಪಡೆದ ಜಿಲ್ಲೆಯ ಲಕ್ಕುಂಡಿ ಭಾಗದ ಹೂವು ಬೆಳೆದ ಅನೇಕ ರೈತರು ಕೊರೊನಾದಿಂದ ಕಂಗಾಲಾಗಿದ್ದಾರೆ. ಅಲ್ಲದೆ ಕೊರೊನಾ ಲಾಕ್‍ಡೌನ್ ವೇಳೆ ಸರ್ಕಾರ ಘೋಷಿಸಿದ್ದ ಪರಿಹಾರ ಇನ್ನೂ ಯಾವ ರೈತರಿಗೂ ತಲುಪಿಲ್ಲ ಎಂದು ಆರೋಪಿಸಿದ್ದಾರೆ.

ಇಲ್ಲಿನ ಬಹುತೇಕ ರೈತರಿಗೆ ಹೂವಿನ ಬೆಳೆ ಅಂದರೆ ಶುಕ್ರದೆಶೆ ಇದ್ದ ಹಾಗೆ. ಆದರೆ ಯಾವಾಗ ಕೊರೊನಾ ಕರಿನೆರಳು ವಕ್ಕರಿಸಿತೋ, ಅಂದಿನಿಂದ ಇವರಿಗೆಲ್ಲಾ ವಕ್ರದೃಷ್ಟಿ ಮನೆ ಮಾಡಿದೆ. ಮಹಾಮಾರಿ ಕೊರೊನಾಗೆ ರೈತ ಕುಲವೂ ನಲುಗಿ ಹೋಗಿದೆ. ಕಳೆದ 2 ವರ್ಷಗಳಿಂದ ಕೊರೊನಾ ಕರಿಛಾಯೆಗೆ ಹೂವು ಬೆಳೆದ ಜಿಲ್ಲೆಯ ರೈತರಿಗೆ ಸೂಕ್ತ ಬೆಲೆ, ಮಾರುಕಟ್ಟೆ ಹಾಗೂ ಪರಿಹಾರ ಇಲ್ಲದೆ, ರೈತರು ಸಾಕು ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆಗೆ ಒಳಗಾಗಿದ್ದಾರೆ. ಅದರಲ್ಲೂ ಪ್ರಕೃತಿ ನಂಬಿ ಕಾಯಕ ಮಾಡುವ ಈ ಅನ್ನದಾತರ ಬದುಕನ್ನೇ ಬುಡಮೇಲು ಮಾಡಿದೆ ಈ ಕೊರೋನಾ. ಇದನ್ನು ಓದಿ: ತರಕಾರಿ ವಾಹನದಲ್ಲಿ ಮದ್ಯ ಸಾಗಾಟ – 500 ಲೀಟರ್ ಎಣ್ಣೆ ವಶಕ್ಕೆ ಪಡೆದ ಪೊಲೀಸರು

ಲಕ್ಕುಂಡಿ, ಕದಾಂಪೂರ, ಪಾಪನಾಶಿ, ಸಂಭಾಪೂರ, ಜಂತ್ಲಿ, ಶಿರೂರ, ಸೇರಿದಂತೆ ಹಲವು ಗ್ರಾಮಗಳ ಹೂ ಬೆಳೆದ ರೈತರು ಲಾಕ್‍ಡೌಲ್‍ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಸಾವಿರಾರು ಎಕರೆಯಷ್ಟು ಸೇವಂತಿ, ಗುಲಾಬಿ, ಮಲ್ಲಿಗೆ, ಕನಕಾಂಬರಿ ಹೂ ಸೇರಿದಂತೆ ವಿವಿಧ ತಳಿಯ ಹೂಗಳು, ಗದಗ, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಬೆಂಗಳೂರು, ಕಲಬುರ್ಗಿ ಜಿಲ್ಲೆ ಮಾರುಕಟ್ಟೆಗೆ ತಲುಪುತ್ತಿದ್ದವು. ಪದೇ ಪದೇ ಪ್ರವಾಹ, ಚಂಡಮಾರುತ, ವಿಪರೀತ ಮಳೆ, ಬರಗಾಲ ಹೀಗೆ ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಲಾಕ್‍ಡೌನ್ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಅಲ್ಲದೇ ಈ ಬಾರಿ ಸರ್ಕಾರ ಘೋಷಿಸಿರುವ ಪರಿಹಾರ ಹಣ ಕೂಡ ಯಾವ ರೈತರಿಗೂ ತಲುಪಿಲ್ಲ ಎಂದು ಹೂವು ಬೆಳೆದ ರೈತರು ಆರೋಪಿಸುತ್ತಿದ್ದಾರೆ.

ಸರ್ಕಾರವೇನೋ ಮೊದಲ ಹಂತದ ಪ್ಯಾಕೇಜ್‍ನಲ್ಲಿ ಎರಡೂವರೆ ಎಕರೆಗೆ 10 ಸಾವಿರ ಪರಿಹಾರ ಘೋಷಿಸಿದೆ. ಆದರೆ ಎಕರೆಗೆ ಸುಮಾರು 40 ರಿಂದ 50 ಸಾವಿರ ಖರ್ಚು ಮಾಡುತ್ತವೆ. ನೀವು ಕೊಡುವ ಪರಿಹಾರ ಕಸ ತೆಗೆಯುವುದಕ್ಕೂ ಸಾಲದು ಅಂತಿದ್ದಾರೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮದುವೆ, ಜಾತ್ರೆ, ಶುಭ ಸಮಾರಂಭಗಳು ಜೋರಾಗಿರುತ್ತೆ. ಆದರೆ ಅದೇ ತಿಂಗಳಲ್ಲಿ ಲಾಕ್‍ಡೌನ್ ಹೊಡೆತ ಹೂ ಬೆಳೆಗಾರರನ್ನು ಮಕಾಡೆ ಮಲಗಿಸಿದೆ. ಯಾವ ಸಮಾರಂಭ, ಮದುವೆ, ಧಾರ್ಮಿಕ ಕಾರ್ಯಕ್ರಮ ಇಲ್ಲದ್ದಕ್ಕೆ ಬೆಳೆದ ಹೂಗಳು ಗಿಡದಲ್ಲೇ ಬಾಡಿ ಹೋಗಿವೆ. ಸರ್ಕಾರದ ಪರಿಹಾರದ ಹಣ ನಿಜವಾದ ಹೂ ಬೆಳೆಗಾರರಿಗೆ ತಲುಪುತ್ತಿಲ್ಲ. ತೋಟಗಾರಿಕೆ ಅಧಿಕಾರಿಗಳು ತಮಗೆ ಬೇಕಾದವರ ಅಕೌಂಟಗೆ ಹಣ ನೀಡುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ. ಇದನ್ನು ಓದಿ:ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ

ಮಾರುಕಟ್ಟೆ ಇಲ್ಲದ್ದಕ್ಕೆ ಬೆಳೆದ ಹೂಗಳನ್ನು ಕಟಾವು ಮಾಡಿಲ್ಲ. ಇದರಿಂದ ಗಿಡಗಳಿಗೂ ರೋಗ ಹತ್ತುವ ಮೂಲಕ ರೈತ ಸಾಲ ಸೂಲ ಮಾಡಿ ಹಾಕಿದ ಬಂಡವಾಳವೆಲ್ಲ ನೀರಲ್ಲಿ ಹೋಮ ಮಾಡಿದಂತಾಗಿದೆ. ಹೀಗಾಗಿ ರೈತ ಹೂವಿನ ಬೆಳೆ ತನ್ನ ಕೈಯಾರೇ ಹಾಳು ಮಾಡುತ್ತಿದ್ದಾನೆ. ಸರ್ಕಾರ ಪರಿಹಾರ ನೀಡುವುದಾದರೆ ಬೆಳೆದ ಬೆಳೆಗೆ ತಕ್ಕದಾದ ಪರಿಹಾರದ ಮೊತ್ತ ನೀಡಲಿ ಎಂದು ಹೂ ಬೆಳೆದ ರೈತರು ಆಗ್ರಹಿಸಿದ್ದಾರೆ.

Advertisement
Advertisement