ಕೊಡಗು: ಕಳೆದ ವರ್ಷ ಪ್ರಾಕೃತಿಕ ವಿಕೋಪಕ್ಕೆ ಸಿಕ್ಕಿ ಮನೆಗಳನ್ನು ಕಳೆದುಕೊಂಡವರಿಗ ಕಡೆಗೂ ಸೂರಿನ ಭಾಗ್ಯ ಸಿಕ್ಕಿದ್ದು, ಕರ್ಣಂಗೇರಿಯಲ್ಲಿ ಇಂದು 35 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಮಡಿಕೇರಿ ತಾಲೂಕಿನ ಕರ್ಣಂಗೇರಿಯಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ನಿರ್ಮಿಸಿದ್ದ 35 ಆಶ್ರಯ ಮನೆಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಉಸ್ತುವಾರಿ ಸಚಿವ ವಿ.ಸೋಮಣ್ಣ ಹಸ್ತಾಂತರಿಸಿದರು.
ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಕೊಡಗು ಜಿಲ್ಲಾ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೆಯೇ ನೆರೆ ಸಂತ್ರಸ್ತರಿಗೆ ಮನೆಗಳ ಹಸ್ತಾಂತರಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈಗಾಗಲೇ ಕರ್ಣಂಗೇರಿಯಲ್ಲಿ 35 ಮನೆಗಳು ನಿರ್ಮಾಣವಾಗಿದ್ದು, ಮನೆಗಾಗಿ 100 ಅರ್ಜಿಗಳನ್ನು ಹಾಕಲಾಗಿದೆ.
ಈ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕೋಲಾರದಲ್ಲಿ ಕಳೆದ ಸಂಸತ್ ಚುನಾವಣೆಯಲ್ಲಿ ನನ್ನ ಸೋಲಿಗೆ ರಮೇಶ್ ಕುಮಾರ್ ಕಾರಣವೆಂದು ಪರಾಭವಗೊಂಡ ಸ್ವಪಕ್ಷದ ಕೆ.ಎಚ್.ಮುನಿಯಪ್ಪ ಅವರೇ ಹೇಳುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಬೇರೆಯವರ ಬಗ್ಗೆ ಮಾತನಾಡುತ್ತಾರೆ. ಇದು ರಾಜ್ಯಕ್ಕೆ ಬಂದಿರುವ ದುರ್ದೈವ ಎಂದು ಟೀಕಿಸಿದರು.
ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ವೈಯಕ್ತಿಕವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮಗೆ ತಾವೇ ಪ್ರಶ್ನೆಗಳನ್ನು ಹಾಕಿಕೊಳ್ಳಲಿ. ಅವರೇ ಒಬ್ಬರು ಪಕ್ಷಾಂತರಿಯಾಗಿದ್ದುಕೊಂಡು ಪಕ್ಷಾಂತರ ಶಾಸಕರ ಬಗ್ಗೆ ಮಾತನಾಡುತ್ತಾರೆ. ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಬಿಜೆಪಿ-ಕೆಜೆಪಿ ವಿಭಜನೆಯಾದ ನಂತರ ಆಕಸ್ಮಿಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆ ಅವಧಿಯಲ್ಲಿ 5 ವರ್ಷಗಳು ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನಾವು ಹಿಂದುಳಿದವರು ಹಾಗೂ ದಲಿತರ ಪರ ಇದ್ದೇವೆ ಎಂದು ಬರೀ ಭಾಷಣವನ್ನಷ್ಟೇ ಮಾಡಿದ್ದು ಬಿಟ್ಟರೆ ಬೆರೇನು ಮಾಡಲಿಲ್ಲ ಎಂದು ಕುಟುಕಿದರು.
ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ಹೀನಾಯ ಸ್ಥಿತಿಗೆ ಸಿದ್ದರಾಮಯ್ಯನವರೇ ಕಾರಣ. ಹಿಂದುಳಿದ ವರ್ಗಗಳ ಜಾತಿ ಜನಗಣತಿಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ 188 ಕೋಟಿ ರೂ. ವ್ಯಯ ಮಾಡಿದರು. ಜಾತಿ ಗಣತಿಯ ವರದಿ ಸಿದ್ಧವಾಗಿದ್ದು ಸಿಎಂ ಅನುಮತಿ ಕೊಟ್ಟರೆ ಬಿಡುಗಡೆ ಮಾಡುತ್ತೇವೆ ಎಂದು ಆ ಸಂಸ್ಥೆಯ ಅಧ್ಯಕ್ಷರಾಗಿದ್ದ ಕಾಂತರಾಜು ಅವರೇ ಒಮ್ಮೆ ನನಗೆ ಹೇಳಿದ್ದರು. ವಿಧಾನ ಪರಿಷತ್ನಲ್ಲೂ ಜಾತಿ ಗಣತಿಯನ್ನು ನಾಳೆ, ನಾಡಿದ್ದು ಬಿಡುಗಡೆ ಮಾಡುತ್ತೇವೆ ಎನ್ನಲಾಗಿತ್ತು. ಹೀಗೆ ಹೇಳಿದ್ದು ಬಿಟ್ಟರೆ ಅದನ್ನು ಬಿಡುಗಡೆ ಮಾಡಲೇ ಇಲ್ಲ. ಇದೀಗ ಹಿಂದುಳಿದವರ ಬಗ್ಗೆ ಜೋರಾಗಿ ಮಾತನಾಡುತ್ತಿದ್ದು, ಹಿಂದುಳಿದವರ ಪರವಾಗಿ ಬಿಜೆಪಿ ಸರ್ಕಾರ ಇಲ್ಲ ಎಂದು ಆರೋಪಿಸುತ್ತಾ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.
ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ವರ್ಚಸ್ಸು ಕಡಿಮೆಯಾಗುತ್ತಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಅವರನ್ನು ಬಿಟ್ಟರೆ ಸಿದ್ದರಾಮಯ್ಯ ಅವರೇ ರಾಷ್ತ್ರೀಯ ಅಧ್ಯಕ್ಷರಾ? ಹಾಗಿದ್ದರೆ ಅವರೇ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗಬೇಕಿತ್ತು. ಸಮರ್ಥ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಆಗದ ಇವರಿಗೆಲ್ಲ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಯಾವ ಯೋಗ್ಯತೆ, ಅಧಿಕಾರವಿದೆ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.