Connect with us

Bagalkot

ಭಾಗಮಂಡಲ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ – ಚೋರ್ಲಾ ಘಾಟ್ ನಲ್ಲಿ ಗುಡ್ಡ ಕುಸಿತ

Published

on

– ದೇವದುರ್ಗ- ಕಲಬುರಗಿ ಮಾರ್ಗದ ರಸ್ತೆ ಸಂಚಾರ ಬಂದ್
– ಕೂಡಲಸಂಗಮದಲ್ಲಿ ಪ್ರವಾಹ ಭೀತಿ

ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ ನದಿಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆ ಈ ನದಿಗಳ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಹಲವೆಡೆ ಸೇತುವೆ ಮುಳುಗಡೆಯಾಗಿದ್ದು, ಹಲವು ಮಾರ್ಗಗಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಕೊಡಗು ಜಿಲ್ಲೆಯ ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಹಿನ್ನಲೆ ಭಾಗಮಂಡಲ ತ್ರಿವೇಣಿ ಸಂಗಮ ಮೂರನೇ ಬಾರಿಗೆ ಜಲಾವೃತಗೊಂಡಿದೆ. ಪರಿಣಾಮ ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರ ಜೊತೆಗೆ ತಲಕಾವೇರಿಗೆ ಕೂಡ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ಅಲ್ಲದೆ ದಕ್ಷಿಣ ಕೊಡಗಿನಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸ್ಥಳೀಯರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ಇತ್ತ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ನದಿ ತೀರದ ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಅಲ್ಲದೆ ನಾರಾಯಣಪುರ ಜಲಾಶಯದಿಂದ 2 ಲಕ್ಷ 62 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಪರಿಣಾಮ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಕೂಡ ಮುಳುಗಡೆಯಾಗಿದ್ದು, ದೇವದುರ್ಗ -ಕಲಬುರಗಿ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ. ಪ್ರವಾಹ ಎದುರಿಸಲು ರಾಯಚೂರು ಜಿಲ್ಲಾಡಳಿತ ಮುಂಜಾಗೃತ ಕ್ರಮ ತೆಗೆದುಕೊಳ್ಳುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರದ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ.

ಒಂದೆಡೆ ಮಹಾ ಮಳೆ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಉಕ್ಕಿಹರಿಯುತ್ತಿದೆ. ಇನ್ನೊಂದೆಡೆ ಮೂರು ನದಿಗಳಿಂದ ಕೂಡಿದ ಬಸವಣ್ಣನ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸಂಗಮನಾಥನ ದೇವಸ್ಥಾನ ಜಲಾವೃತಗೊಂಡಿದ್ದು, ನೀರಲ್ಲೇ ನಡೆದುಕೊಂಡು ಹೋಗಿ ಭಕ್ತರು ಸಂಗಮನಾಥನ ದರ್ಶನ ಪಡೆಯುತ್ತಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿ-ಗೋವಾ ಮಧ್ಯದ ರಸ್ತೆಯ ಪಕ್ಕದ ಗುಡ್ಡ ಕುಸಿತವಾಗಿದೆ. ಬೆಳಗಾವಿ ಗಡಿಯ ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿದು ಬಿದ್ದ ಪರಿಣಾಮ ರಸ್ತೆ ಮೇಲೆ ಬೃಹತ್ ಬಂಡೆಗಲ್ಲುಗಳು ಬಿದ್ದಿವೆ. ಹೀಗೆ ಕುಸಿಯುತ್ತಿರುವ ರಸ್ತೆಯಲ್ಲಿ ವಾಹನಗಳು ಸಿಲುಕಿ ಹಾಕಿಕೊಳ್ಳುತ್ತಿದೆ. ಆದ್ದರಿಂದ ಜೆಸಿಬಿಯಿಂದ ಸಿಬ್ಬಂದಿಗಳು ರಸ್ತೆ ಸಂಚಾರ ಸುಗಮಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಎರಡು ನದಿಗಳ ಅಬ್ಬರಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾತ್ರೋರಾತ್ರಿ ಭೀಮಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆಯಾದ ಹಿನ್ನೆಲೆ ಯಾದಗಿರಿಯ ಕಂಗಳೇಶ್ವರ ಮತ್ತು ವೀರಾಂಜನೇಯ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಸಣ್ಣ ಮುನ್ಸೂಚನೆಯನ್ನೂ ನೀಡದೇ ನೀರು ಬಿಡುಗಡೆ ಮಾಡಲಾಗಿದೆ. ಭಾನುವಾರ ರಾತ್ರಿ ಬರಿದಾಗಿದ್ದ ಭೀಮಾ ನದಿ ಬೆಳಕು ಹರಿಯುತ್ತಿದ್ದಂತೆ ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.