Saturday, 22nd February 2020

Recent News

ತಗ್ಗಿದ ಪ್ರವಾಹ-ಮನೆ ನೋಡಲು ಬಂದವ ನದಿ ಪಾಲು

ಬೆಳಗಾವಿ/ಚಿಕ್ಕೋಡಿ: ಬೆಳಗಾವಿ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರವಾಹ ತಗ್ಗಿದ್ದು, ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರು ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಹೀಗೆ ತಮ್ಮ ಮನೆಯ ಪರಸ್ಥಿತಿ ಹೇಗಿದೆ ಎಂದು ನೋಡಲು ಹೋದ ಇಬ್ಬರಲ್ಲಿ ಓರ್ವ ನೀರು ಪಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾತ್ರಾಳ ಗ್ರಾಮದ ಜಯಪಾಲ ರಾಯಪ್ಪ ಯರಂಡೊಲಿ (40) ಮೃತ ವ್ಯಕ್ತಿ. ಮಹಾವೀರ ಕಲ್ಲಪ ಯರಂಡೊಲಿ (25) ಬದುಕುಳಿದ ವ್ಯಕ್ತಿ. ಬೆಳಗಿನ ಜಾವ ತಮ್ಮ ಮನೆಯ ವೀಕ್ಷಣೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಈಗಾಗಲೇ ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳಕ್ಕೆ ಕಾಗವಾಡ ಪಿ ಎಸ್ ಐ ಹಾಗೂ ಉಪ ತಹಶೀಲ್ದಾರ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದು ಶವ ಹುಡುಕಾಟದ ಕಾರ್ಯ ನಡೆದಿದೆ.

ಕೃಷ್ಣಾ ಪ್ರವಾಹಕ್ಕೆ ಸಿಲುಕಿ ನಲುಗಿದ ಗ್ರಾಮಗಳಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಆಶ್ರಯ ಕೇಂದ್ರದಿಂದ ಸದ್ಯ ಗ್ರಾಮದತ್ತ ಬರುತ್ತಿರುವ ಕೃಷ್ಣಾ ಸಂತ್ರಸ್ತರು ರಕ್ಕಸ ಪ್ರವಾಹದಿಂದ ಉಂಟಾಗಿರುವ ಹಾನಿಯಿಂದ ಚೇತರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದೆ.

ಜನ ತಮ್ಮ ಮನೆಗಳನ್ನ ನೋಡಿ ಕಣ್ಣೀರು ಇಡುತ್ತಿದ್ದಾರೆ. ಸಾಕಷ್ಟು ಮನೆಗಳು ನೆಲಕಚ್ಚಿವೆ. ಮನೆಯಲ್ಲಿದ್ದ ಧವಸ ಧಾನ್ಯಗಳು ಹಾಳಾಗಿ ಹೋಗಿವೆ. ನೀರನಲ್ಲಿ ಮುಳುಗಿ ಹೋಗಿದ್ದ ಗೃಹಪಯೋಗಿ ವಸ್ತುಗಳು, ದಾಖಲೆಗಳನ್ನ ಬಿಸಿಲಿಗೆ ಒಣಗಿಸುವ ಕಾರ್ಯವನ್ನ ಜನ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *