Connect with us

Karnataka

ಉಕ್ಕಿ ಹರಿಯುತ್ತಿದ್ದಾಳೆ ಪಾಪನಾಶಿನಿ- ಉಡುಪಿ ಅದಮಾರು ಮಠದ 21 ಹಸುಗಳು ಶಿಫ್ಟ್

Published

on

ಉಡುಪಿ: ಅದಮಾರು ಮಠದ ಹಸುಗಳಿಗೂ ನೆರೆಯ ಬಿಸಿ ತಟ್ಟಿದ್ದು, ಕೃಷ್ಣಮಠದ ಪರ್ಯಾಯ ಅದಮಾರು ಮಠದ 21 ಹಸುಗಳನ್ನು ಉದ್ಯಾವರ ಸಮೀಪದ ಮಠದ ಕುದ್ರುವಿನಲ್ಲಿ ಸಾಕಲಾಗುತ್ತಿತ್ತು. ಇದೀಗ ನೆರೆಯಿಂದಾಗಿ ಈ ಪ್ರದೇಶ ನಡುಗದ್ದೆಯಂತಾಗಿದ್ದು, ಹಸುಗಳನ್ನು ಸ್ಥಳಾಂತರಿಸಲಾಗಿದೆ.

ನಿರಂತರ ಮಳೆಯಿಂದಾಗಿ ಪಕ್ಕದ ಪಾಪನಾಶಿನಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಿದ ಪರಿಣಾಮ ಮಠದ ಕುದ್ರುವಿಗೆ ನದಿಯ ನೀರು ತುಂಬಿಕೊಂಡಿದೆ. ಇದರಿಂದಾಗಿ ಹಸುಗಳು ನಡುಗಡ್ಡೆಯಲ್ಲಿ ಆಶ್ರಯ ಪಡೆದಿದ್ದವು. ಸ್ಥಳೀಯ ವಿಭುದೇಶ ನಗರದಲ್ಲಿರುವ ಮೂವತ್ತಕ್ಕೂ ಅಧಿಕ ಮನೆಗಳಿಗೂ ಕೂಡ ನೀರು ನುಗ್ಗಿತ್ತು. ವಿಷಯ ತಿಳಿದ ಅದಮಾರು ಮಠದ ಸಿಬ್ಬಂದಿ ತಕ್ಷಣ ಮಠದ ಕುದ್ರುವಿಗೆ ಧಾವಿಸಿದ್ದಾರೆ. ನಡುಗಡ್ಡೆಯಲ್ಲಿ ಸಂಕಷ್ಟದಲ್ಲಿದ್ದ ಮೂವತ್ತಕ್ಕೂ ಅಧಿಕ ಹಸುಗಳನ್ನು ಸ್ಥಳಾಂತರಿಸಿದ್ದಾರೆ.

ಟೆಂಪೋ ಮೂಲಕ ಎಲ್ಲ ಹಸುಗಳನ್ನು ಉಡುಪಿ ಕೃಷ್ಣ ಮಠದ ಗೋಶಾಲೆಗೆ ಸಾಗಾಟ ಮಾಡಲಾಗಿದೆ. ಸದ್ಯ ಮಠದ ಹಸುಗಳು ಗೋಪಾಲಕೃಷ್ಣ ಸನ್ನಿಧಿಯಲ್ಲಿ ಸುರಕ್ಷಿತವಾಗಿವೆ. ಮಠದ ಸಿಬ್ಬಂದಿ ಹಸುಗಳ ಸ್ಥಳಾಂತರಕ್ಕೆ ಸ್ಥಳೀಯರು ಸಹಕರಿಸಿದ್ದಾರೆ.

ಈ ಕುರಿತು ಅದಮಾರು ಮಠದ ಮ್ಯಾನೇಜರ್ ಗೋವಿಂದರಾಜ್ ಮಾತನಾಡಿ, ವಿಭುದೇಶ ನಗರದಲ್ಲಿ ಮಠದ 30 ಹಸುಗಳನ್ನು ಸಾಕುತ್ತಿದ್ದೇವೆ. ವಿಪರೀತ ಮಳೆ ಬಂದು ವಿಭುದೇಶ ನಗರ ಆಪತ್ತಿನಲ್ಲಿದೆ. ನೀರಿನ ಮಟ್ಟ ಜಾಸ್ತಿಯಾಗಿ ಹಸುಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರು, ಮತ್ತು ಈಶಪ್ರಿಯ ತೀರ್ಥ ಶ್ರೀಪಾದರ ಆದೇಶದಂತೆ ಹಸುಗಳನ್ನು ಉಡುಪಿಗೆ ರವಾನಿಸುತ್ತಿದ್ದೇವೆ. ಮಳೆ ಕಡಿಮೆಯಾಗುವವರೆಗೆ ರಾಜಾಂಗಣದ ಪಕ್ಕದಲ್ಲಿ ಎಲ್ಲ ಹಸುಗಳನ್ನು ಆರೈಕೆ ಮಾಡುತ್ತೇವೆ ಎಂದರು.

Click to comment

Leave a Reply

Your email address will not be published. Required fields are marked *