Monday, 17th June 2019

ಪೊಲೀಸ್ ವಾಹನದಲ್ಲೇ ಮನೆಗೆ ತೆರಳಿ ಐವರಿಂದ ಯುವತಿಯ ಕಿಡ್ನಾಪ್!

ಭೋಪಾಲ್: ಐದು ಜನರ ಗುಂಪೊಂದು ಪೊಲೀಸರನ್ನು ಬಂಧಿಸಿ ಅವರ ವಾಹದಲ್ಲಿಯೇ 18 ವರ್ಷದ ಯುವತಿಯನ್ನು ಅಪಹರಿಸಿಕೊಂಡು ಹೋಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶ ಪನ್ನಾ ಜಿಲ್ಲೆಯ ಬಮುರ್ಹಾ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕುಡಿದು ಬಿದ್ದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮಾಹಿತಿ ತಿಳಿದು ವಾಹನದಲ್ಲಿ ಚಾಲಕನ ಜೊತೆ ಇಬ್ಬರು ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ.

ಲಭಿಸಿದ ಮಾಹಿತಿಯಂತೆ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದ. ಈ ವೇಳೆ ವಾಹನದಿಂದ ಕೆಳಗಿಳಿದ ಇಬ್ಬರು ಪೊಲೀಸರು ಅವನ ಸಮೀಪಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದಂತೆ ನಟಿಸುತ್ತಿದ್ದ ಕುಡುಕ ತಕ್ಷಣ ಪೊಲೀಸರಿಗೆ ಗನ್ ತೋರಿಸಿ ಅಲ್ಲೇ ಸಮೀಪದಲ್ಲಿ ಅಡಗಿಕೊಂಡು ಕುಳಿತ್ತಿದ್ದ ನಾಲ್ವರನ್ನು ಕರೆದಿದ್ದಾನೆ.

ಅಡಗಿಕೊಂಡಿದ್ದ ನಾಲ್ವರು ಬಂದು ಎಲ್ಲರು ಸೇರಿಕೊಂಡು ಪೊಲೀಸರನ್ನು ಬಂಧಿಸಿ ಅವರ ಬಟ್ಟೆಯನ್ನು ಕಳಚಿ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಬಳಿಕ ಪೊಲೀಸರನ್ನು ಕೂರಿಸಿಕೊಂಡು ವಾಹನದಲ್ಲೇ ಪೊಲೀಸರಂತೆ ಪೋಸ್ ಕೊಟ್ಟು, 18 ವರ್ಷದ ಯುವತಿಯ ಮನೆಗೆ ಹೋಗಿದ್ದಾರೆ. ಬಳಿಕ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ.

ಈ ಪ್ರಕರಣದ ಬಗ್ಗೆ ಯುವತಿಯ ತಂದೆ ರಾಜ್‍ಕುಮಾರ್ ಪಟೇಲ್ ಪ್ರತಿಕ್ರಿಯಿಸಿ, ಪೊಲೀಸರು ಬಂದು ನನ್ನ ಮತ್ತು ನನ್ನ ಮಗಳನ್ನು ಠಾಣೆಗೆ ಕರೆದರು. ನಂತರ ನಾನು ನನ್ನ ಸಹೋದರನನ್ನ ಕರೆದೆ. ಕೊನೆಗೆ ಮೂವರು ಜೊತೆಯಲ್ಲಿ ಪೊಲೀಸ್ ವಾಹನದಲ್ಲಿ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅವರು ಗನ್ ತೋರಿಸಿ ಬೆದರಿಸಿ ನನ್ನನ್ನು ಮತ್ತು ಸಹೋದರನ್ನು ಕೆಳಗಿಸಿ ಮಗಳನ್ನು ಅಪಹರಿಸಿಕೊಂಡು ಹೋದರು ಎಂದು ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಈ ಐದು ಮಂದಿ ಬಂಧಿತ ಪೊಲೀಸರನ್ನು ಬಿಟ್ಟು ಅಪಹರಿಸಿದ ಯುವತಿಯೊಂದಿಗೆ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ರಿಯಾಜ್ ಇಕ್ಬಾಲ್ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *