Connect with us

Cricket

ರಾಹುಲ್ ಫಸ್ಟ್, ಪಂಜಾಬ್ ಲಾಸ್ಟ್ – ಆರ್ಚರ್ ಡಾಟ್ ಬಾಲ್, ಪಡಿಕ್ಕಲ್ ಮಿಂಚು, ನಟರಾಜನ್ ಯಾರ್ಕರ್

Published

on

– ಅರ್ಧ ಜರ್ನಿ ಯಶಸ್ವಿಯಾಗಿ ಮುಗಿಸಿದ ಐಪಿಎಲ್-2020

ಅಬುಧಾಬಿ: ಕೊರೊನಾ ನಡುವೆಯೂ ಯುಎಇಯಲ್ಲಿ ಆರಂಭವಾದ ಐಪಿಎಲ್-2020 ಯಶಸ್ವಿಯಾಗಿ ತನ್ನ ಐಪಿಎಲ್ ಅರ್ಧ ಪ್ರಯಾಣವನ್ನು ಮುಗಿಸಿದೆ. ಈ ಐಪಿಎಲ್‍ನಲ್ಲಿ ಹಲವಾರು ಯುವ ಪ್ರತಿಭೆಗಳು ಹೊರಬಂದಿದ್ದು, ಭಾರತದ ಕ್ರಿಕೆಟ್ ಹಾದಿಗೆ ಭದ್ರ ಬುನಾದಿ ಹಾಕಿದೆ.

ರಾಹುಲ್ ಫಸ್ಟ್, ಪಂಜಾಬ್ ಲಾಸ್ಟ್: ಈ ಬಾರಿಯ ಐಪಿಎಲ್‍ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರು ಸೂಪರ್ ಆಗಿ ಆಡುತ್ತಿದ್ದಾರೆ. ಈಗಾಗಲೇ ಆಡಿದ ಏಳು ಮ್ಯಾಚಿನಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕದ ನೆರವಿನಿಂದ 387 ರನ್‍ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಕೂಡ 337 ರನ್‍ಗಳಿಂದ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ರಾಹುಲ್ ಬ್ಯಾಟ್ಸ್ ಮ್ಯಾನ್ ಆಗಿ ಯಶಸ್ವಿಯಾದ್ರೂ, ನಾಯಕನಾಗಿ ವಿಫಲರಾಗಿದ್ದಾರೆ. ಅವರ ನೇತೃತ್ವದ ಪಂಜಾಬ್ ತಂಡ ಆಡಿದ ಏಳು ಪಂದ್ಯದಲ್ಲಿ ಒಂದರಲ್ಲಿ ಗೆದ್ದು, ಆರರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.

ಆರ್ಚರ್ ಡಾಟ್ ಬಾಲ್, ನಟರಾಜನ್ ಯಾರ್ಕರ್: ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಫ್ರಾ ಆರ್ಚರ್ ಅವರು ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ್ದಾರೆ. ಈಗಾಗಲೇ 7 ಪಂದ್ಯಗಳಲ್ಲಿ 28 ಓವರ್ ಬೌಲ್ ಮಾಡಿರುವ ಆರ್ಚರ್ ಬರೋಬ್ಬರಿ 87 ಡಾಟ್ ಬಾಲ್ ಎಸೆದು ಮೊದಲ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಅನ್ರಿಚ್ ನಾಟ್ರ್ಜೆ ಅವರು 77 ಡಾಟ್ ಬಾಲ್ ಎಸೆದು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ಹೈದರಾಬಾದ್ ತಂಡ ನಟರಾಜನ್ ಏಳು ಪಂದ್ಯಗಳನ್ನಾಡಿ ಅದರಲ್ಲಿ 31 ಯಾರ್ಕರ್ ಎಸೆದು ಇಂಪ್ರೆಸಿವ್ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡಿಗರ ಮೇಲುಗೈ: ಈ ಬಾರಿಯ ಐಪಿಎಲ್‍ನಲ್ಲಿ ಕನ್ನಡಿಗರ ಹವಾ ಜೋರಾಗಿದೆ. ರಾಹುಲ್ ಮತ್ತು ಮಯಾಂಕ್ ಆರೆಂಜ್ ಕ್ಯಾಪ್ ಲಿಸ್ಟ್‍ನಲ್ಲಿ ಮೊದೆಲೆರಡು ಸ್ಥಾನದಲ್ಲಿ ಇರುವ ಜೊತೆಗೆ ಇಬ್ಬರು ತಲಾ ಒಂದೊಂದು ಶತಕ ಬಾರಿಸಿದ್ದಾರೆ. ಜೊತೆಗೆ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಕೂಡ ಆಡಿದ ಏಳು ಪಂದ್ಯದಲ್ಲಿ ಮೂರು ಅರ್ಧಶತಕದ ಜೊತೆಗೆ 243 ರನ್ ಗಳಿಸಿದ್ದಾರೆ. ಜೊತೆಗೆ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಮನೀಶ್ ಪಾಂಡೆ, ಪ್ರಸೀದ್ ಕೃಷ್ಣ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಸಿಕ್ಸರಿನಲ್ಲಿ ಸಂಜು ಫಸ್ಟ್: ಆರಂಭದಿಂದಲೇ ಉತ್ತಮವಾಗಿ ಆಡಿದ ಸಂಜು ಸ್ಯಾಮ್ಸನ್ ಅವರು, ಆಡಿದ ಏಳು ಪಂದ್ಯಗಳಲ್ಲಿ ಬರೋಬ್ಬರಿ 16 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಇವರ ನಂತರ ಈ ಪಟ್ಟಿಯಲ್ಲಿ ಪೂರನ್ ಕೂಡ 16 ಸಿಕ್ಸರ್ ಸಿಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಟಿಯಾ 15 ಸಿಕ್ಸರ್ ಬಾರಿಸಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಜೊತೆಗೆ 37 ಫೋರ್ ಹೊಡೆದಿರುವ ರಾಹುಲ್ ಹೆಚ್ಚು ಬೌಂಡರಿ ಸಿಡಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದರೆ, 34 ಫೋರ್ ಹೊಡೆದ ಮಯಾಂಕ್ ಅಗರ್ವಾಲ್ ಎರಡನೇ ಸ್ಥಾನದಲ್ಲಿ ಇದ್ದಾರೆ.

ಯುವ ಆಟಗಾರರ ಮಿಂಚು: ಐಪಿಎಲ್ ಅರ್ಧಭಾಗಕ್ಕೆ ಬರುವ ವೇಳಗೆ ಭಾರತದ ಯುವ ಆಟಗಾರರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಈ ಪೈಕಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್‍ನ ದೇವದತ್ ಪಡಿಕ್ಕಲ್ 3 ಫಿಫ್ಟಿ ಸೇರಿದಂತೆ 7 ಪಂದ್ಯಗಳಲ್ಲಿ 243 ರನ್ ಗಳಿಸಿದ್ದಾರೆ. ಹೈದರಾಬಾದ್‍ನ ಟಿ ನಟರಾಜನ್ 31 ಯಾರ್ಕರ್ ಸಮೇತ ಏಳು ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದು ಮಿಂಚಿದ್ದಾರೆ. ಪಂಜಾಬ್‍ನ ರವಿ ಬಿಷ್ಣೋಯ್ 7 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಶಿವಮ್ ಮಾವಿ, ಕಮಲೇಶ್ ನಾಗರಕೋಟಿ ಮುಂತಾದವರು ಒಳ್ಳೆಯ ಪ್ರದರ್ಶನ ತೋರಿದ್ದಾರೆ.

ಪ್ರದರ್ಶನ ತೋರದ ಸ್ಟಾರ್ ಆಟಗಾರರು: ಐಪಿಎಲ್‍ನಲ್ಲಿ ಹೆಚ್ಚು ಹಣ ಪಡೆದುಕೊಂಡು ಕೆಲ ಆಟಗಾರರು ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಅದರಲ್ಲಿ ಮೊದಲಿಗರು ಕೋಲ್ಕತ್ತಾ ತಂಡದ ಪ್ಯಾಟ್ ಕಮ್ಮಿನ್ಸ್ ಅವರು, ಇವರು ಕೆಕೆಆರ್ 15.5 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದರೆ ಅವರು ಏಳು ಪಂದ್ಯವಾಡಿ ಕೇವಲ 2 ವಿಕೆಟ್ ಪಡೆದುಕೊಂಡಿದ್ದಾರೆ. ಜೊತೆಗೆ ಬ್ಯಾಟಿಂಗ್‍ನಲ್ಲೂ ಮಿಂಚಿಲ್ಲ. ಜೊತೆಗೆ ಚೆನ್ನೈ ತಂಡದಲ್ಲಿ ನಾಯಕ ಎಂಎಸ್ ಧೋನಿಯವರು ಕೂಡ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಕೀಪಿಂಗ್‍ನಲ್ಲಿ ಮೋಡಿ ಮಾಡಿದರೂ ಬ್ಯಾಟಿಂಗ್‍ನಲ್ಲಿ ಏಳು ಪಂದ್ಯಗಳಲ್ಲಿ 112 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *