Corona
ಶಿವಮೊಗ್ಗದ ವ್ಯಕ್ತಿಗೆ ಸೌತ್ ಆಫ್ರಿಕಾ ವೈರಸ್ – ಮೆಗ್ಗಾನ್ ಆಸ್ಪತ್ರೆಗೆ ದಾಖಲು

– ಆತಂಕದಲ್ಲಿ ಜೆ.ಪಿ.ನಗರ ಬಡಾವಣೆಯ ನಿವಾಸಿಗಳು
ಶಿವಮೊಗ್ಗ: ಶಿವಮೊಗ್ಗದ ಜೆ.ಪಿ.ನಗರ ಬಡಾವಣೆಯ 53 ವರ್ಷದ ವ್ಯಕ್ತಿಗೆ ಸೌತ್ ಆಫ್ರಿಕಾ ವೈರಸ್ ಪತ್ತೆಯಾಗಿದ್ದು, ಇದೀಗ ಬಡಾವಣೆಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಶಿವಮೊಗ್ಗದ ಜೆ.ಪಿ.ನಗರದ 53 ವರ್ಷದ ನಿವಾಸಿ ಜನವರಿಯಲ್ಲಿ ಶಿವಮೊಗ್ಗದಿಂದ ಸೌದಿ ಅರೇಬಿಯಾಗೆ ತೆರಳಬೇಕಿತ್ತು. ಬೆಂಗಳೂರಿನಿಂದ ದುಬೈಗೆ ಹೋಗಿ ಅಲ್ಲಿಂದ ಸೌದಿ ಅರೇಬಿಯಾಗೆ ಬೇರೊಂದು ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು. ದುಬೈಗೆ ಹೋದ ವ್ಯಕ್ತಿಗೆ ದುಬೈನಿಂದ ಸೌದಿ ಅರೇಬಿಯಾಗೆ ಹೋಗಲು ವಿಮಾನ ಲಭ್ಯವಾಗಲಿಲ್ಲ. ಹೀಗಾಗಿ ಈ ವ್ಯಕ್ತಿ ದುಬೈನಲ್ಲೇ 20 ರಿಂದ 25 ದಿನಗಳ ಕಾಲ ಕಳೆದರು.
ಸೌದಿ ಅರೇಬಿಯಾಗೆ ತೆರಳಲು ವಿಮಾನ ಸಿಗದ ಕಾರಣ ಮತ್ತೆ ದುಬೈನಿಂದ ಬೆಂಗಳೂರಿಗೆ ಫೆ. 21 ರಂದು ಹೊರಟು ಫೆ.22 ರಂದು ಬೆಂಗಳೂರಿಗೆ ಬಂದಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಈ ವ್ಯಕ್ತಿಯ ಸ್ವ್ಯಾಬ್ ತೆಗೆದು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿದ್ದಾರೆ. ನಂತರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕೆಎಸ್ಆರ್ ಟಿಸಿ ಬಸ್ ನಲ್ಲಿ ಈ ವ್ಯಕ್ತಿ ಪ್ರಯಾಣ ಮಾಡಿದ್ದಾರೆ.
ಶಿವಮೊಗ್ಗಕ್ಕೆ ಬಂದ ನಂತರ ಈ ವ್ಯಕ್ತಿ ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಯಾವುದೇ ರೋಗ ಲಕ್ಷಣ ಇಲ್ಲದ ಕಾರಣ ಕ್ವಾರಂಟೈನ್ ಮುಗಿದ ಬಳಿಕ ಎಲ್ಲಾ ಕಡೆ ಓಡಾಡಿದ್ದಾರೆ. ಅವರದ್ದೇ ಪ್ರಾವಿಷನ್ ಸ್ಟೋರ್ ನಲ್ಲಿ ವ್ಯಾಪಾರ ಸಹ ಮಾಡಿದ್ದಾರೆ.
ಆದರೆ ನಿನ್ನೆ ರಾತ್ರಿ ಈ ವ್ಯಕ್ತಿಗೆ ಸೌತ್ ಆಫ್ರಿಕಾ ವೈರಸ್ ಇರುವುದು ಪತ್ತೆಯಾಗಿದೆ. ರಾತ್ರಿಯೇ ಈತನ ಮನೆಗೆ ತೆರಳಿದ ಆರೋಗ್ಯ ಸಿಬ್ಬಂದಿ ಸೋಂಕಿತನನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸೋಂಕಿತನ ಪತ್ನಿ ಹಾಗೂ ಪುತ್ರನನ್ನು ಚಿಕಿತ್ಸೆಗೆ ಒಳಪಡಿಸಿದ್ದಾರೆ. ಅಲ್ಲದೇ ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಮಂದಿಯ ಮೇಲೆ ನಿಗಾ ಇರಿಸಿದ್ದಾರೆ.
ವೈರಸ್ ಪತ್ತೆಯಾದ ವ್ಯಕ್ತಿ ಎಲ್ಲೆಡೆ ಓಡಾಟ ನಡೆಸಿರುವುದರಿಂದ, ಅಂಗಡಿಯಲ್ಲಿ ವ್ಯಾಪಾರ ಮಾಡಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಇಂದು ಸ್ಥಳಕ್ಕೆ ಭೇಟಿ ನೀಡಿ ಸೋಂಕಿತನ ನಿವಾಸದ ಅಕ್ಕಪಕ್ಕದ ಮನೆಗಳ ಜನರು ಹಾಗೂ ಈತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಸ್ವ್ಯಾಬ್ ತೆಗೆದುಕೊಂಡಿದ್ದಾರೆ. ಆದರೂ ಈ ಬಡಾವಣೆಯ ಜನರು ಮಾತ್ರ ಆತಂಕಕ್ಕೆ ಒಳಗಾಗಿದ್ದಾರೆ.
