Saturday, 17th August 2019

ಶಾಮಿಯಾನ ಗೋಡಾನ್ ಧಗಧಗ – ಕೋಟ್ಯಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ಬೆಂಗಳೂರು: ಡೆಕೋರೇಷನ್ ಗೋದಾಮಿಗೆ ಬೆಂಕಿ ಬಿದ್ದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬನಶಂಕರಿ ಮೂರನೇ ಹಂತ ಹೊಸಕೆರೆಹಳ್ಳಿ ಕೆರೆಕೋಡಿ ಸಮೀಪದ ದಿ.ಲೆಗೆಸಿ ಕಲ್ಯಾಣಮಂಟಪದ ಎದುರಿರುವ ಗೋದಾಮಿನಲ್ಲಿ ಸೋಮವಾರ ರಾತ್ರಿ 10.20ರ ಸುಮಾರಿಗೆ ಬೆಂಕಿ ದುರಂತ ಸಂಭವಿಸಿದೆ.

ಅಮಿತ್ ಎಂಬವರಿಗೆ ಸೇರಿದ್ದ ಶಾಮಿಯಾನ ಮತ್ತು ಡೆಕೊರೇಟ್ ಸೆಟ್ ಗೋಡೌನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪ್ರೀನ್ಸಸ್ ಗಾಲ್ಫ್ ಮಾಲೀಕತ್ವದ ಶಾಮಿಯಾನ ಸೆಟ್ ಗೋಡಾನ್ ನವರು ನಗರದ ಪ್ಯಾಲೆಸ್ ಗ್ರೌಂಡ್ ನಲ್ಲಿ ಮದುವೆ ಸಮಾರಂಭಕ್ಕೆ ಶಾಮಿಯಾನ ಸೆಟ್ ಹಾಕುತ್ತಿದ್ದರು. ಇದೇ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಈ ಹಿಂದೆ ಇದೇ ಗೋಡಾನ್ ನಲ್ಲಿ ಟಗರು ಸಿನೆಮಾ ಶೂಟ್ ಸಹ ಮಾಡಲಾಗಿತ್ತು. ಬೆಂಕಿಯ ಕಿಡಿಗೆ 10ಕ್ಕು ಹೆಚ್ಚು ಸಿಲಿಂಡರ್ ಗಳು ಸ್ಫೋಟದಿಂದ ಕೋಟ್ಯಂತರ ಮೌಲ್ಯದ ಸೆಟ್ ಗಳು ಬೆಂಕಿಗಾಹುತಿಯಾಗಿವೆ. ಸತತ ಮೂರು ಗಂಟೆಗಳಿಂದ ಹೊತ್ತಿ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆಗೆ ಸುತ್ತ ಮುತ್ತಲಿನ ಅಪಾರ್ಟ್ ಮೆಂಟ್ ಜನ ಆತಂಕಕ್ಕೊಳಗಾಗಿದ್ದಾರೆ. 10ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.

ಸ್ಥಳಕ್ಕಾಗಮಿಸಿದ ರಾಜರಾಜೇಶ್ವರಿ ನಗರ ಪೊಲೀಸರು ಘಟನೆಯ ಕಾರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ನಿಖರ ಕಾರಣ ತಿಳಿದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *