Tuesday, 28th January 2020

ನಾಮಪತ್ರ ಸಲ್ಲಿಸುವ ದಿನವೇ ಪ್ರತಾಪ್‍ಸಿಂಹಗೆ ಎಫ್‍ಐಆರ್ ಶಾಕ್!

ಮೈಸೂರು: ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಸಿಂಹ ವಿರುದ್ಧ ದೂರು ದಾಖಲಾಗಿದೆ.

ಪ್ರತಾಪ್ ಸಿಂಹ ಅವರು ಸರ್ಕಾರಿ ಅಂಚೆ ಕಚೇರಿ ಮೂಲಕ ಬುಕ್ ಲೆಟ್‍ಗಳನ್ನ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‍ಓಯು) ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯರಾದ ಕೆ ಎಸ್.ಶಿವರಾಮ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಈ ದೂರನ್ನು ಪರಿಶೀಲನೆ ನಡೆಸಿದ ಬಳಿಕ ಫ್ಲೈಯಿಂಗ್ ಸ್ಕ್ವಾಡ್ ಸಹಾಯಕ ಚುನಾವಣಾಧಿಕಾರಿ ಉಮೇಶ್ ಅವರು ದೂರು ನೀಡಿದ್ದು, ಮಾರ್ಚ್ 23 ರಂದು ಎಫ್‍ಐಆರ್ ದಾಖಲು ಮಾಡಲಾಗಿದೆ.

ಬುಕ್ ಲೆಟ್ ಗಳಲ್ಲಿ ಪ್ರಚಾರಕರ ಹಾಗೂ ಮುದ್ರಕರ ವಿವರ ನೀಡದೇ ಇರುವುದು ಹಾಗೂ ಬುಕ್ ಲೆಟ್ ಗಳ ಮುದ್ರಣ ಸಂಖ್ಯೆ ಲೆಕ್ಕ ಸಿಗದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

ಇತ್ತ ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರತಾಪ್ ಸಿಮಹ ಅವರು ಟೆಂಪಲ್ ರನ್ ಮಾಡುತ್ತಿದ್ದು, ಚಾಮುಂಡಿ ದೇವಿಯ ದರ್ಶನ ಪಡೆದ್ರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಹುಲಿಗಳಿಗೆ ಪ್ರಸಿದ್ಧಿಯಾಗಿದೆ. ಚಾಮುಂಡೇಶ್ವರಿ ಕುಳಿತಿರೋದು ಸಿಂಹದ ಮೇಲೆ. ಆದರೆ ಚಾಮುಂಡೇಶ್ವರಿ ತನ್ನ ವಾಹನವನ್ನ ಕೈಬಿಡೋದಿಲ್ಲ ಎಂಬ ನಂಬಿಕೆ ಇದೆ. ಮೈಸೂರಿಗೆ ಮೋದಿ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದ್ರೆ ಮೈಸೂರು ಪ್ರವಾಸ ಖಚಿತವಾಗಿದೆ. ಇಂದು ಸಂಜೆ ವೇಳೆಗೆ ಮೈಸೂರು ಪ್ರವಾಸದ ಬಗ್ಗೆ ಖಚಿತ ಮಾಹಿತಿ ಸಿಗಲಿದೆ ಎಂದು ಹೇಳಿದ್ರು.

Leave a Reply

Your email address will not be published. Required fields are marked *