Tuesday, 28th January 2020

ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

– ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ವರ್ಷಿಣಿ, ರೂಪೇಶ್ ಸ್ಕೆಚ್
– ಗುರುವಿನ ಕೊಲೆಗೆ ಹೇಮಿ ಸೇಡು
– ಹೆಸರು ಮಾಡೋ ಹುಚ್ಚಿನಲ್ಲಿ ಕ್ಯಾಟ್ ರಾಜನಿಂದ ಕೃತ್ಯ

ಬೆಂಗಳೂರು: ಒಂದು ವಾರದಿಂದ ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಈಗ ಈ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.

ರಾಜಕರಣದ ಜೊತೆ ತಳಕು ಹಾಕಿದ್ದ ಕಾರಣ ಖುದ್ದು ಅಲೋಕ್ ಕುಮಾರ್ ಅವರೇ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಪಾತಕಿಗಳು ಮೂರು ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎನ್ನುವ ವಿಚಾರ ತನಿಖೆಯ ವೇಳೆ ಗೊತ್ತಾಗಿದೆ. ಇದನ್ನೂ ಓದಿ: ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

ಪ್ರೀತಿಗೆ ಅಡ್ಡಿ:
ಮೊದಲೆಯದಾಗಿ ವರ್ಷಿಣಿ ಮತ್ತು ರೂಪೇಶನ ಪ್ರೀತಿಗೆ ಲಕ್ಷ್ಮಣ್ ಅಡ್ಡವಾಗಿದ್ದನು. ಇನ್ನೂ ನಾಲ್ಕು ವರ್ಷಗಳಿಂದ ಲಕ್ಷ್ಮಣ್, ವರ್ಷಿಣಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ವರ್ಷಿಣಿ ರೂಪೇಶನನ್ನು ಇಷ್ಟ ಪಟ್ಟಿದ್ದು ಆತನನ್ನು ಮದುವೆಯಾಗಲು ಬಯಸಿದ್ದಳು. ಲಕ್ಷ್ಮಣ್ ಜೊತೆ ಇದ್ದರೆ ತನ್ನ ಮುಂದಿನ ಬದುಕು ಕಷ್ಟವಾಗಲಿದೆ ಎನ್ನುವುದು ವರ್ಷಿಣಿಗೆ ಗೊತ್ತಿತ್ತು. ಹೀಗಾಗಿ ತಮ್ಮ ಪ್ರೀತಿಗೆ ಲಕ್ಷ್ಮಣ್ ಅಡ್ಡ ಬರುತ್ತಾನೆ ಎಂದು ತಿಳಿದು ಇಬ್ಬರು ಲಕ್ಷ್ಮಣ್ ಕೊಲೆಗೆ ಸ್ಕೆಚ್ ಹಾಕಿದ್ದರು.

ಗುರುವಿನ ಕೊಲೆಗೆ ಹೇಮಿ ಸೇಡು:
ಆರೋಪಿ ಹೇಮಂತ ಅಲಿಯಾಸ್ ಹೇಮಿಗೆ ಲಕ್ಷ್ಮಣ್ ಮೇಲೆ ಕೋಪ ಇತ್ತು. ಹೇಮಿಯ ಗುರು ಟಿ.ಸಿ.ರಾಜನನ್ನು ಲಕ್ಷ್ಮಣ್ 2015ರ ಜೂನ್ 5 ರಂದು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿಸಿದ್ದನು. ಅಂದಿನಿಂದ ಕೊಲೆಯಾದ ಟಿ.ಸಿ ರಾಜನ ಮಚ್ಚು ಇಟ್ಟುಕೊಂಡು ಲಕ್ಷ್ಮಣನ ಕೊಲೆಗೆ ಸ್ಕೆಚ್ ಹಾಕಿದ್ದನು. ಇದಕ್ಕಾಗಿ ಲಕ್ಷ್ಮಣ್ ಒಂಟಿಯಾಗಿರುವ ಬಗ್ಗೆ ಮಾಹಿತಿ ಕೊಟ್ಟರೆ ಸಾಕು ತಾನೇ ಐದು ಲಕ್ಷ ಹಣ ಕೊಡುತ್ತೀನಿ ಎಂದು ಕಾಯುತ್ತಿದ್ದನು. ಇದೇ ಸಮಯದಲ್ಲಿ ಸರಿಯಾಗಿ ಜೈಲಿನಲ್ಲಿ ರೂಪೇಶ್ ಹೇಮಿಗೆ ಪರಿಚಯವಾಗಿದ್ದನು. ಶತ್ರುವಿನ ಶತ್ರು ಮಿತ್ರ ಎಂಬಂತೆ ರೂಪೇಶನ ಮಾತಿಗೆ ಖುಷಿಯಿಂದ ಆರೋಪಿ ಹೇಮಿ ಕೊಲೆಗೆ ಒಪ್ಪಿಕೊಂಡಿದ್ದನು. ಈಗಾಗಲೇ ಅಂಬೋಡ ಕೊಲೆ ಕೇಸಿನಲ್ಲಿ ಹೇಮಿಗೆ ಜೀವಾವಧಿ ಶಿಕ್ಷೆಯಾಗುವ ಹಂತದಲ್ಲಿ ಇತ್ತು. ಶಿಕ್ಷೆ ಪ್ರಕಟವಾಗುವಷ್ಟರಲ್ಲಿ ಮತ್ತೊಂದು ಕೊಲೆ ಮಾಡಿಯೇ ಜೈಲು ಸೇರಲು ಹೇಮಿ ನಿರ್ಧರಿಸಿದ್ದನು.

ಹೆಸ್ರು ಮಾಡೋ ಹುಚ್ಚಿನಲ್ಲಿ ಕ್ಯಾಟ್ ರಾಜ:
ಇನ್ನೂ ಆರೋಪಿ ಕ್ಯಾಟ್ ರಾಜ ಒಬ್ಬ ಸುಪಾರಿ ಕಿಲ್ಲರ್ ಕೆಲಸ ಮಾಡುತ್ತಿದ್ದನು. ಕ್ಯಾಟ್ ಗೆ ಫೀಲ್ಡ್ ನಲ್ಲಿ ದೊಡ್ಡ ಹೆಸರು ಮಾಡುವ ಹುಚ್ಚಿತ್ತು. ಹೀಗಾಗಿ ಲಕ್ಷ್ಮಣನನ್ನು ಕೊಂದರೆ ತನ್ನ ಹವಾ ಏರುತ್ತೆ ಎನ್ನುವ ಲೆಕ್ಕಾಚಾರ ಹಾಕಿದ್ದನು. ಇತ್ತ ಹೇಮಿ ಲಕ್ಷ್ಮಣ್ ಕೊಂದರೆ ಹಣ ಕೊಡುತ್ತೇನೆ ಎಂದು ಹೇಳಿದ್ದನು. ಹೀಗಾಗಿ ಹಣದ ಆಸೆಗೆ ಕ್ಯಾಟ್ ರಾಜ ಕೊಲೆಗೆ ಒಪ್ಪಿದ್ದನು. ಮೂವರು ಪ್ಲಾನ್ ಮಾಡಿದಂತೆ ಕೊಲೆ ಮಾಡಿ ಮುಗಿಸಿದ್ದಾರೆ.

ಕೊಲೆ ನಂತರ ಎಲ್ಲರೂ ಬೇರೆ ಬೇರೆ ಹಾದಿಯಲ್ಲಿ ಪರಾರಿಯಾಗಿದ್ದರು. ಹೆಣ್ಣು, ಹಳೆ ದ್ವೇಷ, ಮತ್ತು ರೌಡಿಸಂನಲ್ಲಿ ಹೆಸರು ಮಾಡುವ ಕಾರಣಕ್ಕೆ ಲಕ್ಷ್ಮಣ್ ಕೊಲೆಯಾಗಿರುವುದು ಸಿಸಿಬಿ ತನಿಖೆಯಿಂದ ಸ್ಪಷ್ಟವಾಗಿದೆ. ಹೇಮಿ ಗುರು ಟಿಸಿ ರಾಜನ ಬಳಿ ಇರುವ ಲಾಂಗ್ ಇಟ್ಟುಕೊಂಡು ದಾಳಿಗೆ ಇಳಿಯುತ್ತಿದ್ದನು. ಗುರು ಲಾಂಗ್ ಇಟ್ಟುಕೊಂಡ ದಿನದಿಂದ ಕೈ ಹಾಕಿದ ಯಾವುದೇ ಕೆಲಸ ಫೇಲ್ ಆಗುತ್ತಿರಲಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *