Tuesday, 23rd July 2019

Recent News

ಕಳೇಬರ ಪತ್ತೆ – ರಾಮನಗರಕ್ಕೂ ಮಂಗನ ಕಾಯಿಲೆ ಎಂಟ್ರಿ?

ರಾಮನಗರ: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ರಾಮನಗರಕ್ಕೂ ಕಾಲಿಟ್ಟಿರುವ ಸಂಶಯ ಮೂಡಿದೆ.

ರಾಮನಗರ ಹೊರವಲಯದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರುವ ಮಂಗದ ದೇಹ ಪತ್ತೆಯಾಗಿದ್ದು, ಮಂಗನ ಕಾಯಿಲೆ ಶಂಕೆ ಹಿನ್ನೆಲೆಯಲ್ಲಿ ಮೃತ ಮಂಗದ ಮರಣೋತ್ತರ ಪರೀಕ್ಷೆ ನಡೆಸಿ ದೇಹದ ಕೆಲ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ರಾಮನಗರ ಹೊರವಲಯದ ಕಾಮತ್ ಹೋಟೆಲ್ ಬಳಿ ಮಂಗ ಮೃತಪಟ್ಟಿದ್ದು, ಸುಮಾರು 5 ವರ್ಷದ ಹೆಣ್ಣು ಮಂಗ ಸಾವನ್ನಪ್ಪಿದೆ. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮಂಗ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಪಶುವೈಧ್ಯಾಧಿಕಾರಿಗಳ ಮೂಲಕ ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಮಂಗನ ದೇಹದಲ್ಲಿ ಗೆಡ್ಡೆಯೊಂದು ಕಾಣಿಸಿಕೊಂಡಿದೆ. ಅದು ಮೇಲ್ನೋಟಕ್ಕೆ ಅನಾರೋಗ್ಯದಿಂದ ಆಹಾರ ಸೇವಿಸದೇ ಸಾವನ್ನಪ್ಪಿರುವ ಸಂದೇಹವನ್ನು ವೈದ್ಯಾಧಿಕಾರಿಗಳು ಹೊರಹಾಕಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನ ಪುಣೆ ಹಾಗೂ ಬೆಂಗಳೂರಿನ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ. ರಾಮನಗರ ಹೊರವಲಯದ ಕಾಮತ್ ಹೋಟೆಲ್, ಜನಪದಲೋಕ, ಕೆಂಗಲ್ ಆಂಜನೇಯ ದೇವಾಲಯದ ಬಳಿ ಸುಮಾರು ಐನೂರಕ್ಕು ಹೆಚ್ಚು ಮಂಗಗಳು ವಾಸ ಮಾಡುತ್ತಿದ್ದು, ಇತ್ತೀಚೆಗೆ ಕೆಲವು ಮಂಗಗಳು ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಹಲವರು ಸಾವನ್ನಪ್ಪಿರುವ ಬಗ್ಗೆ ಇದೀಗ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆಯನ್ನ ಮುಂಜಾಗ್ರತಾ ಕ್ರಮವಾಗಿ ನಡೆಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರಕ್ತ ಹಾಗೂ ದೇಹದ ಕೆಲವು ಭಾಗಗಳನ್ನು ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆಯ ಎಸಿಎಫ್ ರಾಮಕೃಷ್ಣಪ್ಪ ಮಾಹಿತಿ ನೀಡಿದ್ದಾರೆ. ಇತ್ತ ಮಂಗನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹೋಟೆಲ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪೂಜೆ ಪುನಸ್ಕಾರ ನಡೆಸಿ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *