Connect with us

Chitradurga

ಹಂದಿ ಕಳ್ಳರಿಂದ ತ್ರಿಬಲ್ ಮರ್ಡರ್ – ಓರ್ವನ ಶಿರ ನಾಪತ್ತೆ

Published

on

– ತಂದೆ, ಮಗ, ಅಣ್ಣನ ಮಗ ಸೇರಿದಂತೆ ಮೂವರ ಕೊಲೆ
– ಆಂಧ್ರ ಮೂಲದ ಕೊಲೆಗಾರರು ಹಂದಿ ಕದ್ದು ಪರಾರಿ ಶಂಕೆ

ಚಿತ್ರದುರ್ಗ: ಹಂದಿ ಕದಿಯಲು ಬಂದಿದ್ದ ಕಳ್ಳರು ಮೂವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಮಾರೇಶ್ (50), ಯಲ್ಲೇಶ್ (30) ಮತ್ತು ಸೀನಪ್ಪ (30) ಕೊಲೆಯಾದ ದುರ್ದೈವಿಗಳು. ಒಂದು ವಾರದ ಹಿಂದೆ ನಾಯಕನಹಟ್ಟಿಗೆ ಬುಲೇರೊ ವಾಹನದಲ್ಲಿ ಬಂದಿದ್ದ ಆಂಧ್ರ ಮೂಲದ ಗುಂಪೊಂದು ನಿಮಗೆ ಪಾಠ ಕಲಿಸುವುದಾಗಿ ಎಚ್ಚರಿಕೆ ಕೊಟ್ಟು ತೆರಳಿದ್ದರು. ಹಂದಿ ವ್ಯಾಪಾರದ ವಿಚಾರದಲ್ಲಿ ಪರಸ್ಪರ ದ್ವೇಷವಿರಬಹುದೆಂಬ ಶಂಕೆ ನಾಯಕನಹಟ್ಟಿಯಲ್ಲಿ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಮಂಗಳವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ನಾಯಕನಹಟ್ಟಿ ಹೊರವಲಯದಲ್ಲಿರುವ ಹಂದಿ ಸಾಕಣೆ ಗುಡಿಸಲಿಗೆ ಏಕಾಏಕಿ ನುಗ್ಗಿದ್ದಾರೆ. ನಂತರ ಗುಡಿಸಲಿನ ಬಳಿ ಮಲಗಿದ್ದ ಮಾರೇಶನ ತಲೆ ಕಡಿದು ಕೊಲೆಗೈದಿದ್ದಾರೆ. ತಲೆ ಇಲ್ಲದ ದೇಹ ಮಾತ್ರ ಸ್ಥಳದಲ್ಲಿ ಪತ್ತೆಯಾಗಿದ್ದು, ಶಿರ ನಾಪತ್ತೆಯಾಗಿದೆ. ಈ ವೇಳೆ ತಂದೆಯೊಂದಿಗಿದ್ದ ಮಗ ಸೀನಪ್ಪ ಹಾಗೂ ಅಣ್ಣನ ಮಗನಾದ ಯಲ್ಲೇಶನ ಕಣ್ಣಿಗಳಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರ ಹಾಗೂ ಕಲ್ಲಿನಿಂದ ಕೊಲೆಗೈದಿದ್ದಾರೆ.

ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಯಲ್ಲೇಶ್ ಗುಡಿಸಲಿನಿಂದ ದೂರ ಓಡಿಹೋಗಿದ್ದಾನೆ. ಆಗ ರಸ್ತೆ ಬದಿಯಲ್ಲೇ ಆತನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ. ಮೂವರನ್ನು ಕೊಂದ ಬಳಿಕ 40ಕ್ಕೂ ಹೆಚ್ಚು ಹಂದಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಣ್ಣೀರು ಹಾಕುತ್ತಾ, ಪತಿ ಮತ್ತು ಮಕ್ಕಳನ್ನು ಕೊಂದವರನ್ನು ತುಂಡಾಗಿ ಕತ್ತರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ ಹಾಗೂ ಎಎಸ್‍ಪಿ ನಂದಗಾವಿ ಸೇರಿದಂತೆ ನಾಹಕನಹಟ್ಟಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ತಜ್ಞರ ತಂಡದೊಂದಿಗೆ ತನಿಖೆ ಮುಂದುವರಿಸಿದ್ದಾರೆ. ಮೃತರ ಸಂಬಂಧಿಗಳ ಹೇಳಿಕೆ ಪಡೆದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಕೃತ್ಯದಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

Click to comment

Leave a Reply

Your email address will not be published. Required fields are marked *