Crime
ಹೆತ್ತ ಮಗನ ಕೊಲೆ ಮಾಡಿ, ಮರದಿಂದ ಜಾರಿ ಬಿದ್ದನೆಂದು ದೂರು ನೀಡಿದ ತಂದೆ
– ಸುಳ್ಳು ಕಥೆ ಕಟ್ಟಿದ ಪಾಪಿ ತಂದೆಯನ್ನು ಬಂಧಿಸಿದ ಪೊಲೀಸರು
ಮಡಿಕೇರಿ: ತಂದೆಯೇ ಮಗನನ್ನು ಕೊಲೆ ಮಾಡಿ ಮರದಿಂದ ಜಾರಿಬಿದ್ದನೆಂದು ದೂರು ನೀಡಿ, ಕಥೆ ಕಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಡಿಕೇರಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ, ಶನಿವಾರಸಂತೆ ಬೈಪಾಸ್ ರಸ್ತೆ ನಿವಾಸಿ ಮಹೇಂದ್ರ ಕುಮಾರ್ ಬಿ.ಬಿ.(52) ಬಂಧಿತ ಆರೋಪಿ. ಮರದಿಂದ ಜಾರಿ ಬಿದ್ದು ಮಗ ಮೃತಪಟ್ಟನೆಂದು ದೂರು ನೀಡಿದ್ದ ತಂದೆಯೇ ಮಗನನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಘಟನೆ ಹೇಗೆ ನಡೆಯಿತು?
ಫೆ.1 ರಂದು ಮಹೇಂದ್ರ ಕುಮಾರ್ ಪುತ್ರ ಏಕಾಂತಚಾರಿ ತೋಟದಲ್ಲಿ ಮರದಿಂದ ಜಾರಿ ಬಿದ್ದು ಮೃತಪಟ್ಟಿರುವುದಾಗಿ ಮಹೇಂದ್ರ ಕುಮಾರ್ ಪೊಲೀಸರಿಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿ ಶವ ಪರೀಕ್ಷೆಯ ಸಂದರ್ಭ ಮೃತನ ದೇಹದಲ್ಲಿ ಹೊಡೆದಾಗ ಆಗುವ ಕೆಲವೊಂದು ಗುರುತುಗಳು ಮೃತ ದೇಹದಲ್ಲಿ ಕಂಡು ಬಂದಿತ್ತು.
ಈ ಬಗ್ಗೆ ಸಂಶಯಗೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಮಹೇಂದ್ರ ಕುಮಾರನೇ ತನ್ನ ಪುತ್ರ ಏಕಾಂತಚಾರಿಯನ್ನು ಜಮೀನಿಗೆ ಕರೆದುಕೊಂಡು ಹೋಗಿ ಜಮೀನಲ್ಲೇ ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮಹೇಂದ್ರ ಕುಮಾರ್ ಅನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.