– ಎರಡರಿಂದ ಎಂಟು ವರ್ಷದೊಳಗಿನ ಕಂದಮ್ಮಗಳು
– ಜನ್ಮದಾತನಿಂದಲೇ ಮೃತ್ಯು
ಜೈಪುರ: ತಂದೆಯೇ ನಾಲ್ಕು ಮಕ್ಕಳನ್ನ ಕತ್ತು ಕೊಯ್ದು ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಬಾಂಸ್ವಾಡ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯ ಬಳಿಕ ತಂದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಕೇಶ್ (8), ಮಾಂಗಿಲಾಲ್ (6), ವಿಕ್ರಮ್ (4) ಮತ್ತು ಗಣೇಶ್ (2) ಕೊಲೆಯಾದ ಮಕ್ಕಳು. ಕುಶಾಲಗಢ ವ್ಯಾಪ್ತಿಯ ಡೂಂಗಲಾಪಾನಿಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಸುಮಾರು 7.30ಕ್ಕೆ ಮನೆಯ ಮುಂದೆ ಬಾಬುಲಾಲ್ (40) ಶವ ನೇತಾಡುತ್ತಿತ್ತು. ಶವ ನೋಡಿದ ಗ್ರಾಮಸ್ಥರು ಭಯಗೊಂಡು ಮನೆಯೊಳಗೆ ಹೋಗಿ ನೋಡಿದ್ರೆ ಬಾಬುಲಾಲನ ನಾಲ್ಕು ಮಕ್ಕಳ ಕೊಲೆಯಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಎಫ್‍ಎಸ್‍ಎಲ್ ತಂಡದ ಜೊತೆ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನ ತಂತಿಯ ರೂಪದ ದಾರದಿಂದ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಆದ್ರೆ ಮನೆಯಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಮಕ್ಕಳನ್ನ ಕೊಲೆಗೈದ ಬಳಿಕ ಬಾಬುಲಾಲ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಬಾಬುಲಾಲ್ ಪತ್ನಿ ಕೂಲಿ ಕೆಲಸದ ಹಿನ್ನೆಲೆ ಗುಜರಾತಿನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೃತ ಬಾಬುಲಾಲ್ ಮದ್ಯದ ದಾಸನಾಗಿದ್ದನು. ಹಾಗಾಗಿ ಪತಿ-ಪತ್ನಿ ನಡುವೆ ಇದೇ ವಿಷಯಕ್ಕೆ ಜಗಳ ನಡೆಯುತ್ತಿತ್ತು. ಕುಡಿತದಿಂದಾಗಿ ಸಾಂಸರಿಕ ಜೀವನವೂ ಹಾಳು ಮಾಡಿಕೊಂಡಿದ್ದನು. ಕೆಲ ದಿನಗಳ ಹಿಂದೆ ಹಲ್ಲೆ ನಡೆಸಿ ಪತ್ನಿಯನ್ನ ಮನೆಯಿಂದ ಹೊರ ಹಾಕಿದ್ದನು. ಕೆಲ ದಿನ ತವರಿನಲ್ಲಿದ್ದ ಬಾಬುಲಾಲ್ ಪತ್ನಿ ನಂತರ ಗುಜರಾತಿನಲ್ಲಿ ಸೇರಿಕೊಂಡಿದ್ದರು.
ಬಾಬುಲಾಲ್ ತಂದೆ ನಿಧನರಾಗಿದ್ದು, ತಾಯಿ ಇವನ ಜೊತೆಯಲ್ಲಿಯೇ ವಾಸವಾಗಿದ್ದರು. ಮಗ ಹಲ್ಲೆ ಮತ್ತು ಕಿರುಕುಳ ನೀಡುತ್ತಿದ್ದ ಹಿನ್ನೆಲೆ ತಾಯಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. ಬಾಬುಲಾಲ್ ಮತ್ತು ಆತನ ಕುಟುಂಬಕ್ಕೆ ಯಾವುದೇ ದ್ವೇಷ ಇರಲಿಲ್ಲ ಎಂದು ಗ್ರಾಮದ ಮುಖಂಡ ಪಾರಸಿಂಗ್ ಹೇಳಿದ್ದಾರೆ.