Thursday, 25th April 2019

ಏರ್ ಸ್ಟ್ರೈಕ್ ದಾಳಿಯ ಬಳಿಕ ರಾಮ ಮಂದಿರ ಮರೆತು ಬಿಟ್ರು: ಫಾರೂಕ್ ಅಬ್ದುಲ್ಲಾ

ವಿಜಯವಾಡ: ಬಾಲಕೋಟ್ ಏರ್ ಸ್ಟ್ರೈಕ್ ದಾಳಿ ಹಾಗೂ ರಾಮ ಮಂದಿರ ವಿಚಾರವಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಾಮ ಮಂದಿರದ ಕುರಿತು ಈಗ ಯಾರೊಬ್ಬರೂ ಮಾತನಾಡುತ್ತಿಲ್ಲ. ಬಾಲಕೋಟ್ ದಾಳಿಯ ಮುನ್ನ ರಾಮ ಮಂದಿರ, ರಾಮ ಮಂದಿರ ಎನ್ನುವ ಕೂಗು ಕೇಳುತ್ತಿತ್ತು. ಈಗ ರಾಮ ಮಂದಿರದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ಬಾಲಕೋಟ್ ಉಗ್ರರ ನೆಲೆಯ ಮೇಲೆ ಭಾರತೀಯ ವಾಯು ಪಡೆ ನಡೆಸಿ ಏರ್ ಸ್ಟ್ರೈಕ್ ದಾಳಿಯಲ್ಲಿ 300 ಜನ ಉಗ್ರರು ಹತ್ಯೆಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಜವಾಗಿ ಏನು ಆಗಿದೆ ಎಂದು ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತು ಯಾರಾದರೂ ಪ್ರಶ್ನಿಸಿದರೆ ಅವರು ದೇಶದ್ರೋಹಿಗಳಾಗುತ್ತಾರೆ. ಇಲ್ಲವೆ ಪಾಕ್ ಪ್ರಜೆ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಹನುಮಂತನಿದ್ದಂತೆ. ಅವರು ಪಾಕಿಸ್ತಾನವನ್ನು ಬಗ್ಗು ಬಡಿಯುತ್ತಾರೆ ಎಂದು ಬಿಜೆಪಿಯವರು ಬಿಂಬಿಸಿದ್ದರು. ಆದರೆ ಪ್ರಧಾನಿ ಮೋದಿ ಪಾಕಿಸ್ತಾನವನ್ನು ಬಗ್ಗು ಬಡಿದರೇ? ಉಗ್ರರ ಅಟ್ಟಹಾಸ ನಿಂತುಹೋಯಿಯೇ ಎಂದು ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *