Crime
ರೈತ ಮುಖಂಡರ ಮೇಲೆ ಹಲ್ಲೆ – 27 ವರ್ಷಗಳ ಬಳಿಕ ಅಧಿಕಾರಿಗಳಿಗೆ ಶಿಕ್ಷೆ

ರಾಯಚೂರು: ರೈತ ಮುಖಂಡರ ಮೇಲೆ 27 ವರ್ಷಗಳ ಹಿಂದೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಲಾಗಿದೆ.
1994 ರ ಜೂನ್ 1 ರಂದು ನಡೆದ ಪ್ರಕರಣದ ಆರೋಪಿಗಳಿಗೆ ಆರೋಪ ಸಾಬೀತಾದ ಹಿನ್ನೆಲೆ ರಾಯಚೂರು 3ನೇ ಜೆಎಂಎಫ್ಸಿ ನ್ಯಾಯಾಲಯ ಇಂದು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಆಗಿನ ಮಾನ್ವಿ ಸಿಪಿಐ ಕಾಶೀನಾಥ್, ಮಾನ್ವಿ ತಹಶೀಲ್ದಾರ್ ರಾಮಾಚಾರಿ ಶಿಕ್ಷೆಗೆ ಗುರಿಯಾದ ಅಧಿಕಾರಿಗಳು. ಹರವಿ ಗ್ರಾಮದ ರೈತ ಮುಖಂಡರಾದ ಶಂಕರಗೌಡ, ಬಸನಗೌಡರನ್ನ ಲಾಕಪ್ ನಲ್ಲಿ ಹಾಕಿ ಥಳಿಸಿ ರಕ್ತಗಾಯ ಮಾಡಿ ಜೀವಬೆದರಿಕೆ ಹಾಕಿದ್ದ ಆರೋಪ ಎದುರಿಸುತ್ತಿದ್ದರು.
ತಹಶೀಲ್ದಾರ್ ಹಾಗೂ ಸಿಪಿಐ ಆರ್ ಡಿಸಿಸಿ ಬ್ಯಾಂಕ್ ನವರೊಂದಿಗೆ ತಡಕಲ್ ಗ್ರಾಮದ ರೈತರ ದಿನಬಳಕೆ ವಸ್ತು ಜಪ್ತಿ ಮಾಡಿದ್ದರು. ಇದನ್ನ ತಡೆಯಲು ಯತ್ನಿಸಿದ ರೈತಮುಖಂಡರಿಗೆ ಅವಾಚ್ಯವಾಗಿ ಬೈದು ಕವಿತಾಳ ಠಾಣೆಯಲ್ಲಿ ಥಳಿಸಿ ರಕ್ತಗಾಯ ಮಾಡಿದ್ದರು. ಅಲ್ಲದೆ ಜೀವಬೆದರಿಕೆ ಹಾಕಿದ್ದರು ಅಂತ ಆರೋಪಿಸಿ ದೂರು ದಾಖಲಾಗಿತ್ತು, ಆರೋಪ ಸಾಬೀತಾಗಿದ್ದು ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ.
